

ಚಿಕ್ಕಮಗಳೂರು: ಆಟದ ಮೈದಾನದಲ್ಲಿ ಸೋತ ವ್ಯಕ್ತಿ ಮತ್ತೆ ಗೆಲ್ಲಬಹುದು. ಆದರೆ ಆತ್ಮ ವಿಶ್ವಾಸ ಕಳೆದುಕೊಂಡವರು ಮತ್ತೆ ಗೆಲ್ಲಲಾರರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸವೇ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಅಭಿಪ್ರಾಯಪಟ್ಟರು.
ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಸೇಂಟ್ ಮೇರೀಸ್ ಶಾಲೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಚಿಕ್ಕಮಗಳೂರು ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ-೨೦೨೪-೨೫ನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡಾಕೂಟದಲ್ಲಿ ಸುಮಾರು ೧೪ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಾಧನೆ, ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸುವ ಮೂಲಕ ಜೀವನದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರತಿ ಯಶಸ್ಸಿನ ಹಿಂದೆ ಅನೇಕ ಪ್ರಯತ್ನಗಳು ಇರುತ್ತವೆ. ಅವುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಅನಾವರಣಗೊಂಡು ಜಯಗಳಿಸಲು ಸಹಕಾರಿಯಾಗುತ್ತದೆ. ಇಲ್ಲಿ ಸಾಧನೆ ಮಾಡಿ ಆಯ್ಕೆಯಾದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೇಂಟ್ ಮೇರೀಸ್ ಸಮೂಹ ಶಾಲೆಗಳ ಸಂಸ್ಥಾಪಕ ಜೆರಾಲ್ಡ್ ಲೋಬೋ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕು. ಸತತವಾಗಿ ಅಭ್ಯಾಸ ಮಾಡಿದಾಗ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದು ಹೇಳಿದರು.
ಅಭ್ಯಾಸ ಮಾಡುವಲ್ಲಿ ಸೋತರೆ ಸ್ವಯಂ ವಿಶ್ಲೇಷಣೆ ಮಾಡಿಕೊಂಡು ಇದಕ್ಕೆ ಕಾರಣ ಹುಡುಕಬೇಕು. ಈ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡಾಗ ಯಶಸ್ವಿಯಾಗಲು ಸಾಧ್ಯ. ಸತತ ಪ್ರಯತ್ನ, ಗುರಿ ಗೆಲುವಿಗೆ ರಹದಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪೂರ್ಣೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ, ತಾಲೂಕು ಅಧ್ಯಕ್ಷ ಪ್ರವೀಣ್ ಪಿಂಟೋ, ಸೇಂಟ್ ಮೇರಿಸ್ ಶಾಲೆಯ ಮುಖ್ಯ ಶಿಕ್ಷಕ ಟಿ.ಎಲ್.ಉತ್ತಮ್, ಪ್ರಮುಖರಾದ ಕೃಷ್ಣರಾಜ್ ಅರಸ್, ಶೇರ್ ಅಲಿ ಮತ್ತಿತರರಿದ್ದರು.