ಯಶಸ್ಸಿಗೆ ವಿದ್ಯೆಯ ಜತೆಗೆ ಆತ್ಮವಿಶ್ವಾಸ ಮುಖ್ಯ

15NRGL1
Published on

ನರೇಗಲ್ಲ: ಜೀವನದಲ್ಲಿ ಯಶಸ್ಸು ಗಳಿಸಲು ವಿದ್ಯೆಯ ಜತೆಗೆ ಆತ್ಮವಿಶ್ವಾಸವು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಅಂತರಾತ್ಮದ ಅರಿವಿನ ಮೂಲಕ ನಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಪ್ರಾಚಾರ್ಯ ಎಸ್.ಸಿ. ಗುಳಗಣ್ಣವರ ಹೇಳಿದರು.

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್​ಎಸ್​ಎಸ್, ರೆಡ್​ಕ್ರಾಸ್, ರೋವರ್ಸ್, ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ತಂದೆ -ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತ ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಎಸ್. ದಢೇಸೂರಮಠ, ಪ್ರಾಚಾರ್ಯ ಎಸ್.ಎಲ್. ಗುಳೇದಗುಡ್ಡ ಮಾತನಾಡಿದರು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶರಣಪ್ಪ ಕುರಿ, ದಾವುದ್ ಅಲಿ ಕುದರಿ, ವೀರಪ್ಪ ಜಿರ್ಲ, ಆನಂದ ನಡವಲಕೇರಿ, ಬಸೀರಾಬಾನು ನದಾಫ್, ರೇಣುಕಾ ಧರ್ವಯತ, ಐ.ಆರ್. ಲಗಳೂರ, ಸಜಿಲಾ, ಸಾಂಸ್ಕೃತಿಕ ಸಂಚಾಲಕ ಎಸ್.ಎಸ್. ಸೂಡಿ, ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಕ್ರೀಡಾ ವಿಭಾಗದ ಸಂಚಾಲಕಿ ಕಾಂಚನಮಾಲಾ ಪಾಟೀಲ, ಎನ್​ಎಸ್​ಎಸ್ ಸಂಚಾಲಕರಾದ ಎಸ್.ಪಿ. ಕುರೇರ, ಎಸ್.ಎಸ್. ಮುಂಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net