ಪಠ್ಯೇತರ ಚಟುವಟಿಕೆಗಳಿಂದ ಆತ್ಮಸ್ಥೈರ್ಯ ವೃದ್ಧಿ

8KDR1
Published on

ಕಡೂರು: ಮಕ್ಕಳು ಶಾಲಾ ಹಂತದಲ್ಲಿ ಪಠ್ಯಕ್ರಮಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡಿದಾಗ ಆತ್ಮಸ್ಥೈರ್ಯ ವೃದ್ಧಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪರಿವರ್ತನ ಇನ್ನೋವೇಟಿವ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಬೀರೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ-ಖಾಸಗಿ ಶಾಲೆಗಳು ಎಂಬ ತಾರತಮ್ಯವಿಲ್ಲದೆ ಸರ್ವರೂ ಸಮಾನರು ಎಂಬ ಮನೋಭಾವದಿಂದ ಮಕ್ಕಳು ಸ್ನೇಹ, ಪ್ರೀತಿ ವಿಶ್ವಾಸ ಒಗ್ಗಟ್ಟಿನ ಗುಣಗಳನ್ನು ಬೆಳಸಿಕೊಳ್ಳಲು ಹಾಗೂ ಅವರಲ್ಲಿರುವ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.

ಬೀರೂರು ಪುರಸಭೆ ಅಧ್ಯಕ್ಷೆ ವನಿತ ಮಧು ಬಾವಿಮನೆ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿಯೇ ಅರ್ಥ ಅಡಗಿದೆ. ಯಾರು ಉತ್ತಮ ಪ್ರತಿಭೆ ನೀಡುತ್ತಾರೋ ಅಂತವರು ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಮಕ್ಕಳು ಕಲಿಕೆ ಜತೆಗೆ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯ ಅಧ್ಯಯನ ನಡೆಸುವ ಮೂಲಕ ತಮ್ಮ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಕೆಡಿಪಿ ನಾಮಿನಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿ, ಮಕ್ಕಳು ಪ್ರತಿಭಾ ಕಾರಂಜಿಯಂತಹ ವೇದಿಕೆಯಿಂದ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಗಲಿದೆ. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net