

ಧಾರವಾಡ: ಸ್ನಾತಕೋತ್ತರ ಸಂಶೋಧನಾ ಸಮ್ಮೇಳನಗಳು ವಿದ್ಯಾರ್ಥಿಗಳಿಗೆ ವಿಷಯ ಮಂಡನೆಯ ಅವಕಾಶಗಳನ್ನು ಕಲ್ಪಿಸಿ, ಆತ್ಮವಿಶ್ವಾಸ ಹೆಚ್ಚಿಸಿ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದು ನವದೆಹಲಿಯ ಐಸಿಎಆರ್ ಸಹಾಯಕ ಮಹಾನಿರ್ದೇಶಕಿ ಡಾ.ಸೀಮಾ ಜಗ್ಗಿ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ 8ನೇ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಯು ಕೃಷಿಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತದೆ.
ಭಾರತದಲ್ಲಿ 77 ಕೃಷಿ ವಿಶ್ವವಿದ್ಯಾಲಯಗಳಿವೆ. ಪ್ರತಿ ವಿಶ್ವವಿದ್ಯಾಲಯವು ಸುಮಾರು 200-300 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತದೆ. ವಿದ್ಯಾರ್ಥಿಗಳು ಪ್ರತಿಯೊಂದರಲ್ಲೂ ವ್ಯವಸ್ಥಿತ ಸಂಶೋಧನೆ ನಡೆಸಿ, ಅವುಗಳ ಲಿತಾಂಶಗಳನ್ನು ಪ್ರಕಟಿಸುತ್ತಾರೆೆ. ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ-ಕಲಿಕೆಗೆ ಸಹಾಯ ಮಾಡುವ ಅನೇಕ ಅನುಕೂಲಗಳನ್ನು ಹೊಂದಿವೆ. ಈ ರೀತಿಯ ಸ್ನಾತಕೋತ್ತರ ಸಮ್ಮೇಳನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಪ್ರದರ್ಶಿಸಲು ಅಧ್ಯಾಪಕ ಸದಸ್ಯರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲು ಸಹಾಯ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನಾ ಕಾರ್ಯ ಪ್ರಸ್ತುತ ಪಡಿಸುವ ಮೂಲಕ ಆತ್ಮವಿಶ್ವಾಸ ಬೆಳೆಸುವುದು ಸ್ನಾತಕೋತ್ತರ ಸಮ್ಮೇಳನದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಸೀಮಿತ ಅವಧಿಯಲ್ಲಿ ಸಂಶೋಧನೆ ನಡೆಸುತ್ತಾರೆ. ಆದರೆ, ಲಿತಾಂಶಗಳು ನಿರಂತರ ಸಂಶೋಧನೆಗೆ ಸಹಾಯ ಮಾಡುತ್ತವೆ ಎಂದರು.
ಧಾರವಾಡ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ.ಯು.ಕೃಷ್ಣರಾಜ್ ಸ್ವಾಗತಿಸಿದರು. ಡಾ.ವಿ.ಆರ್.ಕಿರೇಸೂರ ಪರಿಚಯಿಸಿದರು. ನಿರ್ವಹಣಾ ಮಂಡಳಿ ಸದಸ್ಯ ಶ್ರೀನಿವಾಸ ಕೋಟ್ಯಾನ್, ವೀರನಗೌಡ ಪೊಲೀಸ್‌ಗೌಡರ, ರವಿಕುಮಾರ್ ಮಾಳಿಗೇರ, ಡಾ.ಲತಾ ಪೂಜಾರ ಉಪಸ್ಥಿತರಿದ್ದರು. ಡಾ.ವಿಲಾಸ ಕುಲಕರ್ಣಿ ವಂದಿಸಿದರು.