ಕ್ರೀಡೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಗೋಪಾಲಕೃಷ್ಣ ಬೇಳೂರು

26 sgr 2
ಸಾಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಪರಮೇಶ್ವರಪ್ಪ, ಅನ್ನಪೂರ್ಣಾ, ಪ್ರಸನ್ನ, ಪ್ರಭು, ಮನೋಹರಪ್ಪ ಇತರರಿದ್ದರು.
Published on

ಸಾಗರ: ತಾಲೂಕಿನಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರೂ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವುದು ಶ್ಲಾಘನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ 14 ವರ್ಷದೊಳಗಿನವರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ, ದೈಹಿಕ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಮಕ್ಕಳಲ್ಲಿ ಕ್ರೀಡೆ ಕುರಿತು ಆಸಕ್ತಿ ಕ್ಷೀಣಿಸುತ್ತಿದೆ. ಕರೊನಾ ಸಂದರ್ಭದಲ್ಲಿ ಅನಿವಾರ್ಯವಾಗಿ ಮಕ್ಕಳಿಗೆ ಮೊಬೈಲ್ ಕೊಡಬೇಕಾಯಿತು. ಆದರೆ ಈಗ ಅದನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬದಲಿಗೆ ಮಕ್ಕಳಿಗೆ ಪುಸ್ತಕ ನೀಡಬೇಕು. ಬಿಡುವಿನ ವೇಳೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡಬೇಕು. ಮಕ್ಕಳು ಹೊರಗಿನ ವಾತಾವರಣ, ಪ್ರಕೃತಿಯನ್ನು ಗಮನಿಸುವ ಮನಸ್ಥಿತಿ ಬೆಳೆಸುವ ಕೆಲಸ ಪಾಲಕರು ಮಾಡಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜಗನ್ನಾಥ್ ಮಾತನಾಡಿ, ಸರ್ಕಾರ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳಿಗೆ ನೀಡುತ್ತಿರುವ ಅನುದಾನ ಹಾಗೂ ಶಿಕ್ಷಕರ ದಿನಾಚರಣೆಗೆ ನೀಡುತ್ತಿರುವ ಆರ್ಥಿಕ ಸಹಕಾರ ತೀರ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು. ಗುರುಭವನ ಕಾಮಗಾರಿ ಅಪೂರ್ಣವಾಗಿದ್ದು ಅದನ್ನು ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಕೊಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ದೈಹಿಕ ಶಿಕ್ಷಕರಾದ ಗುರುರಾಜ್, ಕಮಲಾಕರ, ರಾಜ್ಯ ಪ್ರಶಸ್ತಿ ಪುರಸ್ಕೃತ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರಗತಿ ಪ್ರೌಢಶಾಲಾ ತಂಡವನ್ನು ಅಭಿನಂದಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಮುಖರಾದ ಅನ್ನಪೂರ್ಣ, ಕೆ.ಬಿ.ಪ್ರಸನ್ನ, ಇ.ಎನ್. ಪ್ರಭು, ಡಿ.ಮನೋಹರಪ್ಪ, ವಿಕ್ಟೋರಿಯಾ ಫರ್ನಾಂಡಿಸ್, ಎಲ್.ಟಿ. ಗವಿಯಪ್ಪ, ಗಣಪತಿ ಮಂಡಗಳಲೆ, ಮಂಜುನಾಥ್, ಜ್ಯೋತಿ, ಬಿಇಒ ಪರಶುರಾಮಪ್ಪ, ಸತ್ಯನಾರಾಯಣ ಸಿರವಂತೆ, ಎಂ.ವೈ.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net