ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿ ಸಮಾವೇಶ

Navu-neevu
Published on

ದಾಂಡೇಲಿ: ರಾಜಕೀಯ ಜೀವನದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸಿದ್ದೇನೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಶೇಷ ಯೋಜನೆ ತರಲಾಗಿದೆ. ಸಮಾವೇಶಗಳ ಮೂಲಕ ಜಿಲ್ಲೆ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಡಳಿತ ಸುಧಾರಣೆ ಸಮಿತಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ನುಡಿದರು.

ಹಾರ್ನ್‌ಬಿಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶದಲ್ಲಿ ‘ಅಭಿವೃದ್ಧಿಗೊಂದು ಪರ್ಯಾಯ ಕಣ್ಣು’ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಎಂ.ಚಂದ್ರ ಪೂಜಾರಿ ಮಾತನಾಡಿ, ದೇಶದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಜನ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಇಂತಹ ಚುನಾವಣೆ ಪದ್ಧತಿ ಸರಿಪಡಿಸಬೇಕು. ಅಭಿವೃದ್ಧಿಯು ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು. ಅನೇಕ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬಿ.ಎನ್. ವಾಸರೆ ಮಾತನಾಡಿ, ಸಮಾವೇಶದಲ್ಲಿ ವ್ಯಕ್ತವಾಗುವ ವಿಚಾರಧಾರೆಗಳ ಕೈಪಿಡಿ ಮುದ್ರಿಸಿ, ಸರ್ಕಾರಕ್ಕೆ ಕಳುಹಿಸಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರುವಂತೆ ಮಾಡಲಾಗುತ್ತದೆ ಎಂದರು.

ಸಿಐಟಿಯುನ ಮೀನಾಕ್ಷಿ ಸುಂದರಂ ಮಾತನಾಡಿ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ತಾಂಡವಾಡುತ್ತಿದೆ.ಬಹು ಸಂಸ್ಕೃತಿಯ ಭಾರತದಲ್ಲಿ ಏಕ ಸಂಸ್ಕೃತಿಯ ರಾಜಕಾರಣವನ್ನು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವವರನ್ನು ದ್ವೇಷದಿಂದ ನೋಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅದಕ್ಕೆ ಬೆಂಬಲವೂ ದೊರೆಯುತ್ತಿಲ್ಲ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷೆ ಯಮುನಾ ಗಾಂವಕರ ಮಾತನಾಡಿ, ಅಭಿವೃದ್ಧಿಯ ಸ್ಪಷ್ಟ ಪರ್ಯಾಯ ಧೋರಣೆ ಮತ್ತು ಪ್ರಾಯೋಗಿಕ ಅರಿವಿನೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಘಟಿತ ಜನ ಚಳವಳಿ ಈ ಸಮಾವೇಶದಿಂದ ಆರಂಭವಾಗಿದೆ. ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಈ ಹೋರಾಟ ನಡೆಯಲಿದೆ ಎಂದರು.

ಸಹಕಾರಿ ಚಿಂತಕ ಜಾರ್ಜ್ ಫರ್ನಾಂಡಿಸ್, ಸ್ಕೋಡವೇಸ್‌ನ ವೆಂಕಟೇಶ್ ನಾಯಕ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಸಿದ್ದಿ ಹೋರಾಟ ಸಮಿತಿ ಬೇನೇಟ್ ಸಿದ್ಧಿ, ಆದಿವಾಸಿ ಹೋರಾಟ ಸಮಿತಿಯ ಪ್ರೇಮಾನಂದ ವೇಳಪ, ತಿಲಕ ಗೌಡ, ಸುಮಂಗಲಾ ಅಂಗಡಿ, ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಡಿ. ಸ್ಯಾಮ್‌ಸನ್, ಕೀರ್ತಿ ಗಾಂವಕರ, ಸಲೀಂ ಸೈಯದ, ಮೌಲಾಲಿ ಮುಲ್ಲಾ, ರತ್ನದೀಪಾ ಎನ್.ಎಂ,. ಇಮ್ರಾನ್ ಖಾನ, ಕಾಂತರಾವ್ ಜಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net