ಕಲೆ ಸಾಹಿತ್ಯದ ವಿಶಿಷ್ಟ ಪರಂಪರೆಗೆ ಕೊಡುಗೆ

sahithya
ಪಲಿಮಾರಿನಲ್ಲಿ ನಡೆಯುವ ಕಾಪು ತಾಲೂಕು ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಪುಂಡಲೀಕ ಮರಾಠೆ ಮಾತನಾಡಿದರು.
Published on

ಪಡುಬಿದ್ರಿ: ಕಾಪು ತಾಲೂಕು ಕಲೆ ಸಾಹಿತ್ಯ, ಜಾನಪದ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಟ ಪರಂಪರೆ ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನ.16ರಂದು ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಶುಕ್ರವಾರ ಸಮ್ಮೇಳನ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ನುಡಿಜಾತ್ರೆಯಾಗಿದ್ದು ತಾಯಿ ಭುವನೇಶ್ವರೀಯ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಿ ಸಮಾರೋಪದ ವರೆಗೆ ಜರುಗುವ ವಿವಿಧ ಕಾರ್ಯಕ್ರಮಗಳು, ವ್ಯವಸ್ಥಿತವಾಗಿ ನಡೆಸಲು ಪೂರಕ ಉಪಸಮಿತಿಗಳು ಹಾಗೂ ಸಮಿತಿಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಹಳೇ ವಿದ್ಯಾರ್ಥಿ ಲಕ್ಷ್ಮಣ ಶೆಟ್ಟಿ ನಂದಿಕೂರು, ಪಲಿಮಾರು ಚರ್ಚ್ ಧರ್ಮಗುರು ಜೆರಾಲ್ಡ್ ಡಿಮೆಲ್ಲೋ ಮಾತನಾಡಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ., ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿ, ಪ್ರೌಢ ಶಾಲಾ ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net