ದೇಶದಲ್ಲಿ 5 ಕೋಟಿ ಕೇಸ್ ಬಾಕಿ, ಹ್ಯೂಮನ್ ಕ್ಯಾಪಿಟಲ್ ಫಾರ್ ಎ ಡೆವೆಲಪ್ಡ್ ಇಂಡಿಯಾ ಕುರಿತ ಸಮಾವೇಶ ಉದ್ಘಾಟಿಸಿ ಆಂಧ್ರ ರಾಜ್ಯಪಾಲ ಅಬ್ದುಲ್ ನಝೀರ್

mng-sep26-natcon1
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡ ‘ಇಂಡಿಯಾ ಅ್ಯಟ್ 2047’ ಹ್ಯೂಮನ್ ಕ್ಯಾಪಿಟಲ್ ಫಾರ್ ಎ ಡೆವೆಲಪ್ಡ್ ಇಂಡಿಯಾ ಕುರಿತ ಎರಡು ದಿನದ ಸಮಾವೇಶವನ್ನು ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಝೀರ್ ಉದ್ಘಾಟಿಸಿದರು.
Published on

ಮಂಗಳೂರು: ದೇಶದ ಎಲ್ಲ ಕೋರ್ಟ್ ಸೇರಿದಂತೆ 5 ಕೋಟಿ ಪ್ರಕರಣಗಳು ಬಾಕಿಯಿದ್ದು, 10-15 ವರ್ಷದೊಳಗೆ ಇದರ ಇತ್ಯರ್ಥಕ್ಕೆ ನ್ಯಾಯಾಂಗದ ಮೇಲೆ ಅಪಾರ ಒತ್ತಡವಿದೆ. ಪ್ರತೀ ಒಂದು ಪ್ರಕರಣದಿಂದ ಕನಿಷ್ಠ 25 ಜನರು ತೊಂದರೆ ಎದುರಿಸುವಂತಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರೂ ಆಗಿರುವ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಝೀರ್ ಹೇಳಿದರು.

ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡ ‘ಇಂಡಿಯಾ ಅ್ಯಟ್ 2047’ ಹ್ಯೂಮನ್ ಕ್ಯಾಪಿಟಲ್ ಫಾರ್ ಎ ಡೆವೆಲಪ್ಡ್ ಇಂಡಿಯಾ ಕುರಿತ ಎರಡು ದಿನದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೋರ್ಟ್‌ನಲ್ಲಿರುವ ಶೇ.95ರಷ್ಟು ಪ್ರಕರಣಗಳು ಹಳ್ಳಿ ಪ್ರದೇಶದಿಂದ ಬಂದಿದ್ದಿ, ಅವರಿಗೆ ಕೌಟುಂಬಿಕ ಶಾಂತಿ, ಸಮಾಧಾನಗಳೂ ಇಲ್ಲದಾಗಿದೆ. ಒಮ್ಮೆ ಕೇಸು ದಾಖಲಾದರೆ ಸುಲಭದಲ್ಲಿ ಇತ್ಯರ್ಥಗೊಳ್ಳುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನ್ಯಾಯದಾನ ವಿಳಂಬವಾಗಬಾರದು. ಶೇ.95ರಷ್ಟು ಕ್ರಿಮಿನಲ್ ಕೇಸ್‌ಗಳಲ್ಲಿ ಶಿಕ್ಷೆಯಾಗದೆ ಖುಲಾಸೆಗೊಳ್ಳುತ್ತವೆ. ಅನ್ಯಾಯವಾಗಿ ತಪ್ಪಿತಸ್ಥರಲ್ಲದವರು ಕೂಡ ಕೇಸಿನ ಕಾರಣಕ್ಕೆ ಜೈಲಿನಲ್ಲಿ ಕಳೆಯಬೇಕಾಗಿರುವುದೂ ಇದೆ. ಇದಕ್ಕೆ ಡಿಜಿಟಲೀಕರಣ, ಕೃತಕಬುದ್ಧಮತ್ತೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಮಾನವನ ಬುದ್ಧಿಮತ್ತೆಯಿಂದಷ್ಟೇ ಇತ್ಯರ್ಥಪಡಿಸಬೇಕಷ್ಟೆ ಎಂದರು.

ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ಮಾತನಾಡಿ, 1790ರಲ್ಲಿ ಆರಂಭಗೊಂಡ ಕೈಗಾರಿಕಾ ಕ್ರಾಂತಿ ಈಗ ಇಲ್ಲ, ಈಗ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಅದರಲ್ಲಿ ಅಮೆರಿಕ, ಚೀನಾ ಹಾಗೂ ಭಾರತ ಮುಂಚೂಣಿಯಲ್ಲಿದೆ. ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಐದತ್ತು ನಿಮಿಷಗಳಲ್ಲಿ ಸಂಶೋಧನೆ ನಡೆಸಿ ವರದಿ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಡಿಜಿಟಲ್ ವ್ಯವಸ್ಥೆ ಅಭಿವೃದ್ಧಿಯಾಗಿದ್ದು, ದೇಶ ಅಭಿವೃದ್ಧಿ ವೇಗ ಹೆಚ್ಚಿದೆ. 2047 ಕ್ಕೆ ಭಾರತ ಶಕ್ತಿಶಾಲಿಯಾಗುವ ಯೋಜನೆಗೆ ನಾವು ಈಗಲೇ ಮಹತ್ವದ ಕೊಡುಗೆ ನೀಡಬೇಕು ಎಂದರು.

ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್, ಆದಿತ್ಯ ಬಿರ್ಲಾ ಸಮೂಹದ ಮಾನವಸಂಪನ್ಮೂಲ ವಿಭಾಗದ ಮಾಜಿ ನಿರ್ದೇಶಕ ಸಂತೃಪ್ತ ಗುಪ್ತ, ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ಎಚ್.ರಾಜಾ, ಕಾರ್ಯದರ್ಶಿ ಬಸವರಾಜು, ಸಮ್ಮೇಳನ ಸಹ ಅಧ್ಯಕ್ಷ ಕೃಷ್ಣ ಹೆಗ್ಡೆ, ಧೀರಜ್ ಶೆಟ್ಟಿ, ಆಶಾ ಎ.ಪೈ, ಪಿ.ಪಿ.ಶೆಟ್ಟಿ, ಲಕ್ಷ್ಮೀಶ್ ರಾಯ್ ಮತ್ತಿತರರಿದ್ದರು. ಸಮ್ಮೇಳನ ಸಂಯೋಜಕ ಸ್ಟೀವನ್ ಪಿಂಟೊ ಸ್ವಾಗತಿಸಿದರು.

------------------

ಹಿಂದಿನ ಕಾಲದಲ್ಲಿ ಹಿರಿಯರು ಏನಾದರೂ ವಿವಾದ ತಲೆದೋರಿದರೆ, ನಿನ್ನ ಮನೆಗೆ ಸಿವಿಲ್ ವ್ಯಾಜ್ಯ ಬೀಳಲಿ ಎಂದು ಶಾಪ ಹಾಕುತ್ತಿದ್ದರು. ದೇಶದ ಕೋರ್ಟ್ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ಟಿ.ವಿ.ಮೋಹನ್‌ದಾಸ್ ಅವರಂತಹ ಸಮಾಜಮುಖಿ ಚಿಂತನೆಯ ವ್ಯಕ್ತಿಗಳು ಈ ಸಮಸ್ಯೆಗೆ ಪರಿಹಾರಕ್ಕೆ ಸಲಹೆ ನೀಡಬೇಕು.

-ಅಬ್ದುಲ್ ನಝೀರ್, ಆಂಧ್ರಪ್ರದೇಶ ರಾಜ್ಯಪಾಲ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ

------------------

ಪ್ರಸಕ್ತ ಭಾರತ್ಕೆ ಮಾನವ ಸಂಪನ್ಮೂಲವೇ ಆಸ್ತಿ. ಮಾನವ ಬಂಡವಾಳವೇ ಅತಿ ಮಹತ್ವದ ಹೂಡಿಕೆ, 2047ರ ಅಮೃತಕಾಲದಲ್ಲಿರುವ ನಾವು ನಮ್ಮ ಯುವಜನತೆಗೆ ಕೌಶಲ, ಸೃಜನಶೀಲತೆಯ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಮಹತ್ವ ನೀಡಬೇಕು.

-ಶ್ಯಾಮಪ್ರಸಾದ್ ಕಾಮತ್, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net