

ಮೈಸೂರು: ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ‘ಎಲೆಕ್ಟ್ರಾನಿಕ್ ಮತ್ತು ಹಸಿರು ಇಂಧನದ ಉದಯೋನ್ಮುಖ ತಂತ್ರಜ್ಞಾನ’ ವಿಷಯದ ಕುರಿತು ಸಮ್ಮೇಳನ ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ ಮೂರು ಸರ್ಕ್ಯೂಟ್ ವಿಭಾಗಗಳು ಒಳಗೊಂಡ ಹತ್ತು ವಿಶಿಷ್ಟ ಸಂಶೋಧನಾ ಉಪವಿಭಾಗಗಳು ಇದ್ದವು. ವಿಶ್ವದ ವಿವಿಧ ಭಾಗಗಳಿಂದ ಒಟ್ಟು 864 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿತ್ತು. ನಿಖರ ವಿಮರ್ಶೆಯ ನಂತರ 161 ಉನ್ನತ ಮಟ್ಟದ ಪ್ರಬಂಧಗಳು ಪ್ರಸ್ತುತಿಗೆ ಅವಕಾಶ ಮಾಡಿಕೊಡಲಾಯಿತು. ಅಮೆರಿಕಾ, ಜರ್ಮನಿ, ಸೌದಿ ಅರೇಬಿಯಾ ಹಾಗೂ ದೇಶದ ಪ್ರಮುಖ ಸಂಸ್ಥೆಗಳ ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಬಿ ಸುರೇಶ್ ಸಮ್ಮೇಳನ ಉದ್ಘಾಟಿಸಿ ದೇಶದ ಸಿಲಿಕಾನ್ ಮತ್ತು ಸೆಮಿಕಂಡಕ್ಟರ್ ಮಿಷನ್, ಅಂತರಿಕ್ಷ ಸಂಶೋಧನೆ ಹಾಗೂ ಹಸಿರು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇಂಜಿನಿಯರಿಂಗ್‌ನ ಅಸೀಮ ಸಾಮರ್ಥ್ಯ ಉಲ್ಲೇಖಿಸಿದರು.
ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಸುಂದರರಾಜ ಸೀತಾರಾಮ ಅಯ್ಯಂಗಾರ್ ಅವರು, ಕೃತಕ ಬುದ್ಧಿಮತ್ತೆ ಮೂಲಕ ಶಾಶ್ವತ ಹಸಿರು ಇಂಧನ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಮಾಹಿತಿ ಹಂಚಿಕೊಂಡರು.
ಐಇಇಇ ಇಂಡಿಯಾ ಮುಖ್ಯಸ್ಥ ಪ್ರೊ.ಶ್ರೀಕಾಂತ್ ಚಂದ್ರಶೇಖರನ್, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಎನ್, ಸಂತೋಷ್ ಕುಮಾರ್, ಕುಲಸಚಿವ ಪ್ರೊ.ಎಸ್.ಎ. ಧನರಾಜ್, ಎಸ್‌ಜೆಸಿಇ ಪ್ರಭಾರ ಪ್ರಾಂಶುಪಾಲ ಡಾ. ಸಿ. ನಟರಾಜು, ಸಮ್ಮೇಳನದ ಗೌರವಾಧ್ಯಕ್ಷ ಡಾ.ಯು.ಬಿ. ಮಹಾದೇವಸ್ವಾಮಿ ಹಾಗೂ ಇತರರು ಇದ್ದರು.