

ಭಾಲ್ಕಿ: ನಾನಾ ರಂಗಗಳಲ್ಲಿ ಸಾಧನೆ ಮೆಟ್ಟಿಲೇರುತ್ತಿರುವ ಮಹಿಳೆಯರು ಇನ್ನಷ್ಟು ಸಶಕ್ತರಾದರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಹೇಳಿದರು.
ಪಟ್ಟಣದ ಶ್ರೀ ರಾಮಮಂದಿರ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಯೋಜನೆ ಬಿಸಿ ಟ್ರಸ್ಟ್ ಒಕ್ಕೂಟದ ತಾಲೂಕು ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ೨೦-೨೫ ಸ್ವ-ಸಹಾಯ, ಪ್ರಗತಿಬಂಧು ಸಂಘಗಳ ಮೇಲೆ ನಿಗಾ ಇರಿಸಲು ತಮ್ಮನ್ನು ನಿಯೋಜಿಸಿರುವ ಸಂಸ್ಥೆ ಸಬಲೀಕರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಹೀಗಾಗಿ ಮಾತೆಯರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಕೋರಿದರು.
ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಸಂಸ್ಥೆ ಆರ್ಥಿಕ ವ್ಯವಹಾರ ಅತ್ಯಂತ ಪಾರದರ್ಶಕವಾಗಿದೆ. ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯನ್ನು ಅರಿತರೆ ಸಂಸ್ಥೆ ನಿಮಗೆ ಎಷ್ಟು ದೊಡ್ಡ ಶಕ್ತಿ ನೀಡಿದೆ ಎಂಬುದರ ಮನವರಿಕೆ ಆಗಲಿದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶಿವು ಲೋಖಂಡೆ ಮಾತನಾಡಿ, ಧರ್ಮಸ್ಥಳ ಯೋಜನೆಗಳು ಬಡವರಿಗೆ ಪಾಲಿಗೆ ಕಲ್ಪವೃಕ್ಷವಾಗಿವೆ ಎಂದರು.
ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಅಮರ ಬಿರಾದಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಯೋಜನೆಯು ಬ್ಯಾಂಕಿನ ಪ್ರತಿನಿಧಿಯಾಗಿ ಗ್ರಾಮೀಣ ಜನರಿಗೆ ಎಲ್ಲ ಸೌಲಭ್ಯಗಳನ್ನು ಸುಲಭವಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ಮಾಧ್ಯಮ ಸಲಹೆಗಾರ ಸಂತೋಷ ಬಿಜಿ ಪಾಟೀಲ್ ಮಾತನಾಡಿ, ಧರ್ಮಸ್ಥಳ ಯೋಜನೆ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿನ ಮಹತ್ತರ ಕಾರ್ಯಗಳನ್ನು ವಿವರಿಸಿ ನಾವು ಬೆಳೆಯುವುದರ ಜತೆಗೆ ಅಕ್ಕಪಕ್ಕದವರನ್ನೂ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದರು.
ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶಿವರಾಜ ಮಲ್ಲೇಶಿ, ದೀಪಕ ಠಮಕೆ, ಸಂತೋಷ, ಮಲ್ಲಿಕಾರ್ಜುನ, ಆನಂದ, ಜಯಸುಧಾ, ಸಬೀನಾ, ಸುಜಾತಾ, ಮಹಾಂತೇಶ, ಗುರುರಾಜ, ಶ್ರೀಕಾಂತ, ಪೀರಪ್ಪ, ಅರುಣಕುಮಾರ ಇತರರಿದ್ದರು. ಶಿವಾನಂದ ನಿರೂಪಣೆ ಮಾಡಿದರು. ಲಾಯಪ್ಪ ವಂದಿಸಿದರು. ಸಂಸ್ಥೆಯ ಸಾಮಾನ್ಯ ಸೇವಾ ಕೇಂದ್ರವನ್ನು ಎಲ್ಲರೂ ಸೇರಿ ಉದ್ಘಾಟಿಸಿದರು. ಧರ್ಮಸ್ಥಳ ಸಂಸ್ಥೆ ಸಿಇಒ ಅನೀಲಕುಮಾರ ಎಸ್.ಎಸ್. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸಂಸ್ಥೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.