ಮೈಸೂರು: ಕರ್ನಾಟಕ ರಾಜ್ಯ ಮಕ್ಕಳ ವೈದ್ಯರ ಸಂಘದಿಂದ ಅ.18ರಿಂದ ಮೂರು ದಿನಗಳ ಕಾಲ ನಗರದಲ್ಲಿ ಮಕ್ಕಳ ವೈದ್ಯರ ಸಮ್ಮೇಳನ ಆಯೋಜಿಸಿರುವುದಾಗಿ ಸಂಘದ ಅಧ್ಯಕ್ಷ ಡಾ.ಎಸ್.ಎನ್.ಮೋತಿ ತಿಳಿಸಿದರು.
ಜೆಎಸ್‌ಎಸ್ ಮಹಾ ವಿದ್ಯಾಲಯ, ಮೈಸೂರು ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅ.19ರಂದು ಬೆಳಗ್ಗೆ 11ಕ್ಕೆ ಬನ್ನಿಮಂಟಪದ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜಿ.ವಿ.ಬಸವರಾಜ, ವಿವಿಧ ಕ್ಷೇತ್ರದ ಗಣ್ಯರಾದ ಡಾ.ಬಿ.ಸುರೇಶ್, ಡಾ.ಎಂ.ಎಶೇಖರ್, ಡಾ.ಸಿಂಗಾರವೇಲು, ಡಾ.ಕೆ.ಆರ್.ದಾಕ್ಷಾಯಿಣಿ, ಡಾ.ಎಚ್.ಬಸವನಗೌಡಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಮೂರೂ ದಿನದ ಸಮ್ಮೇಳನದಲ್ಲಿ ರಾಜ್ಯಾದ್ಯಂತ ಸುಮಾರು 1200 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯಾಗಾರ ಏರ್ಪಡಿಸಿ, ಮಕ್ಕಳ ಚಿಕಿತ್ಸೆ, ಆರೋಗ್ಯ ಕುರಿತಂತೆ ಇತ್ತೀಚಿನ ವಿದ್ಯಮಾನಗಳ ಅರಿವು ಮೂಡಿಸಲಾಗುವುದು ಎಂದರು. ಸಂಚಾಲಕರಾದ ಡಾ.ಶಶಿಕಿರಣ್, ಡಾ.ಪ್ರಶಾಂತ್ ಇತರರು ಇದ್ದರು.