ವಿಕಲಾಂಗರನ್ನು ನೋಡುವ ದೃಷ್ಟಿ ಬದಲಾಗಲಿ

20BK2
ಬಸವಕಲ್ಯಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಗವಿಕಲರ ಸಮಾವೇಶವನ್ನು ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾದೇವ ಮುಂಗಳೆ ಉದ್ಘಾಟಿಸಿದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಮಹಾಲಿಂಗ ದೇವರು, ಡಾ.ಗವಿಸಿದ್ಧಪ್ಪ ಪಾಟೀಲ್, ನಿಂಗಯ್ಯ ಹಿರೇಮಠ, ಬಸವರಾಜ ಕೌಟೆ, ಸುರೇಶ ಕಾನೇಕರ್ ಇದ್ದರು.
Published on

ಬಸವಕಲ್ಯಾಣ: ಅಂಗವಿಕಲರ ಬಗ್ಗೆ ಅನುಕಂಪ ಬದಲು ಅವರಲ್ಲಿರುವ ಪ್ರತಿಭೆ, ಸಾಮರ್ಥ್ಯ ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸ ಸಮಾಜದಲ್ಲಿ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಉರಿಲಿಂಗಪೆದ್ದಿ ಸಾಹಿತ್ಯ ಸಂಸ್ಕೃತಿಕ ವೇದಿಕೆ ಬೇಲೂರು, ಶರಣ ಉರಿಲಿಂಗಪೆದ್ದಿ ಶಾಖಾ ಮಠ ತ್ರಿಪುರಾಂತ ಸಹಯೋಗದಡಿ ಶ್ರೀ ಶಿವಯೋಗಿ ಸ್ವಾಮೀಜಿ ೩೨ನೇ ಸ್ಮರಣೋತ್ಸವ ನಿಮಿತ್ತ ನಗರದ ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಗವಿಕಲರ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ವಿಕಲಾಂಗರು ಸ್ವಸಾಮರ್ಥ್ಯದ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದರು.

ಸಮಾವೇಶ ಉದ್ಘಾಟಿಸಿದ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾದೇವ ಮುಂಗಳೆ ಮಾತನಾಡಿ, ಸಮಾವೇಶ ಮೂಲಕ ಪ್ರತಿಭೆ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವ ಕಾರ್ಯ ಪ್ರಸಂಶನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿ ತೋರಿಸಿದ್ದಾರೆ. ಯಾವುದೇ ಕ್ಷೇತ್ರವಿರಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರ ನಡೆಯಲಿ ಎಂದು ಆಶಿಸಿದರು.

ಅಂಗವಿಕಲ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಿದ್ದರು. ನೇತೃತ್ವ ವಹಿಸಿದ್ದ ಶ್ರೀ ಮಹಾಲಿಂಗ ದೇವರು, ಪತ್ರಕರ್ತ ಬಸವರಾಜ ಕೌಟೆ ಮಾತನಾಡಿದರು. ಆಹಾರ ಶಿರಸ್ತೇದಾರ ನಿಂಗಯ್ಯ ಹಿರೇಮಠ, ಪರಿಸರ ಅಭಿಯಂತರ ಮನೋಜಕುಮಾರ ಕಾಂಬಳೆ, ಸಂಜುಕುಮಾರ ನಡುಕರ್ ಉಪಸ್ಥಿತರಿದ್ದರು. ಸುರೇಶ ಕಾನೇಕರ ಸ್ವಾಗತಿಸಿದರು. ಸೂರ್ಯಕಾಂತ ಭೋಸ್ಲೆ ವಂದಿಸಿದರು. ನಿತ್ಯಾನಂದ ಮಂಠಾಳಕರ ನಿರೂಪಣೆ ಮಾಡಿದರು.

ಶಿವಯೋಗಿ ರತ್ನ ಪ್ರಶಸ್ತಿ ಪುರಸ್ಕೃತರು: ವಿವಿಧ ಕ್ಷೇತ್ರದ ಸಾಧಕರಾದ ಸಂತೋಷ ಧಾಯಗೊಂಡ(ಶಿಕ್ಷಣ), ಲಾಲ್ ಮಹ್ಮದ್ ಕಲಮೂಡ (ಆಡಳಿತ), ಶಿವಕುಮಾರ ಪಾಟೀಲ್ (ಯೋಜಕರು), ಶಿವಕುಮಾರ ಬಿರಾದಾರ (ಅಧಿಕಾರಿ), ಮನೋಜಕುಮಾರ ಕಾಂಬಳೆ (ಪರಿಸರ), ಸುನೀಲ ಮಲಗೆ(ಸಮಾಜ ಸೇವೆ) ಅವರಿಗೆ ಶಿವಯೋಗಿ ರತ್ನ ಪ್ರಶಸ್ತಿ ಹಾಗೂ ಶತಾಯುಷಿ ರುಕ್ಮಿಣಿಬಾಯಿ ವಿಠ್ಠಲ್ ವಾಘಮಾರೆ (೧೦೨) ಅವರಿಗೆ ಶತಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net