

ಉಡುಪಿ: ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್ ಆಶ್ರಯದಲ್ಲಿ ಡಿ.24 ಮತ್ತು 25ರಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಕರಾವಳಿ ನೃತ್ಯ ಕಲಾವಿದರ ಸಮ್ಮೇಳನ ನೃತ್ಯೋತ್ಕರ್ಷ-2023 ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧೀರ್ ರಾವ್ ಕೊಡವೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24ರಂದು ಬೆಳಗ್ಗೆ 9.45ಕ್ಕೆ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ನೂಪುರ ಕಲಾವಿದರ ಸಾಂಸತಿಕ ಟ್ರಸ್ಟ್ ನಿರ್ದೆಶಕ ಪ್ರೊ.ಕೆ. ರಾಮಮೂರ್ತಿ ರಾವ್ ಸಮ್ಮೇಳಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಎಂ. ಮೋಹನ್ ಆಳ್ವಾ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಪುತ್ತೂರಿನ ವೈದ್ಯ ಡಾ. ಹರಿಕೃಷ್ಣ ಪಾಣಾಜಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಕಮಲಾಕ್ಷ ಆಚಾರ್, ಕಾರ್ಯಾಧ್ಯಕ್ಷ ಯು.ಕೆ.ಪ್ರವಿಣ್ ಭಾಗವಹಿಸಲಿದ್ದಾರೆ. 25ರಂದು 4.30ಕ್ಕೆ ನಡೆಯುವ ಸಮಾರೋಪದ ಸಮಾರಂಭದಲ್ಲಿ ಕರಾವಳಿಯ ಹಿರಿಯ ನೃತ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕತ ಉಳ್ಳಾಲ ಮೋಹನ್ ಕುಮಾರ್ ಇವರಿಗೆ ನೃತ್ಯೋತ್ಕರ್ಷ ಪ್ರಶಸ್ತಿಪ್ರದಾನ ಮಾಡಲಾಗುವುದು ಎಂದರು.
2 ದಿನದ ಸಮ್ಮೇಳನದಲ್ಲಿ 250 ನೃತ್ಯಗುರುಗಳು, 750ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅನೇಕ ವಿದ್ವಪೂರ್ಣ ವಿಚಾರಗೋಷ್ಠಿಗಳು, ನೃತ್ಯಪ್ರದರ್ಶನಗಳು, ಚರ್ಚಾಗೋಷ್ಠಿಗಳೂ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಯು.ಕೆ. ಪ್ರವಿಣ್, ವಿದ್ವಾನ್ ಭವಾನಿ ಶಂಕರ್, ವಿದುಷಿ ಭಾಗೀರಥಿ, ವಿದುಷಿ ಮಾನಸಿ ಸುಧೀರ್, ವಿದುಷಿ ಡಾ. ರಶ್ಮಿ ಗುರುಮೂರ್ತಿ ಉಪಸ್ಥಿತರಿದ್ದರು.