

ಹುಮನಾಬಾದ್: ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ನಡೆಯಿತು.
ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಡಾ.ಹೇಮಾವತಿ ಹೆಗ್ಗಡೆ ಮಾರ್ಗದರ್ಶದಲ್ಲಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿದ ಟ್ರಸ್ಟ್ರ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಕ್ಷೇತ್ರದ ಹಿನ್ನೆಲೆ, ಸ್ವಸಹಾಯ ಸಂಘದ ಕಲ್ಪನೆ, ಸಿಸಿ ಖಾತೆಯಲ್ಲಿ ಆಗುವ ವ್ಯವಹಾರ, ತಗಲುವ ಬಡ್ಡಿ, ಸಿ.ಸಿ ಖಾತೆ ಹಾಗೂ ಟರ್ಮ್ ಲೋನ್ ನಿರ್ವಹಣೆಗಿರುವ ವ್ಯತ್ಯಾಸವನ್ನು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವರಾವ ತಳಘಟಕರ್, ಡಾ.ಹಸನ್ ಮಾತನಾಡಿ, ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ ನೀಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾಂಕ್ ಆಫ್ ಬರೋಡ ಪ್ರಬಂಧಕ ಅವಿನಾಶ ಮೌರ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ರ ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ತಿಳಿಹೇಳಿದರು.
ಯೋಜನಾಧಿಕಾರಿ ವೀರೇಶ ಮಾತನಾಡಿ, ತಾಲೂಕಿನ ಸಾಧನೆ ಜತೆಗೆ ವಿಮೆಗೆ ಸಂಬಂಧಿಸಿದ ಪ್ರಗತಿ, ಆರೋಗ್ಯ ರಕ್ಷಾ ಕವಚ, ಸಂಪೂರ್ಣ ಸುರಕ್ಷಾ, ಕಾರ್ಯಕರ್ತರ ಕುಟುಂಬ ಸುರಕ್ಷಾ ಯೋಜನೆ ಬಗ್ಗೆ ವಿವರಿಸಿದರು.