ಮಾ. ೧೦ಕ್ಕೆ ಸರ್ಕಾರಿ ಯೋಜನೆ ಫಲಾನುಭವಿಗಳ ಸಮ್ಮೇಳನ

udp-9-angara
Published on

ಉಡುಪಿ: ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮಾ. ೧೦ಕ್ಕೆ ಕಟಪಾಡಿಯಲ್ಲಿ ನಡೆಯಲಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಪೂರ್ವ ತಯಾರಿ ವೀಕ್ಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 1,48,479, ಸಾರ್ವಜನಿಕ ಶಿಕ್ಷಣ ಇಲಾಖೆಯ 3,80,425, ಕಾರ್ಮಿಕ ಇಲಾಖೆ 5,44,361, ಗ್ರಾಮೀಣ ಕುಡಿಯುವ ನೀರು ಯೋಜನೆ 2,47,179, ಸಹಕಾರ ಇಲಾಖೆಯ 75,000, ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆ 1,96,945, ಕೆ.ಎಂ.ಎಫ್ 96,996, ಕೃಷಿ ಇಲಾಖೆಯ 3,16,320, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 65,157 ಮೀನುಗಾರಿಕೆ ಇಲಾಖೆಯ 14,568 ಫಲಾನುಭವಿಗಳು ಸೇರಿದಂತೆ ವಿವಿಧ ಇಲಾಖೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದರು.

ಪ್ರತೀ ಇಲಾಖೆಯವರು ಫಲಾನುಭವಿಗಳನ್ನು ಕರೆತರಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ ಎಂದರು. ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕ ಮಾಹಿತಿ ನೀಡಲು ಇಲಾಖಾವಾರು ಮಾಹಿತಿ ವಸ್ತುಪ್ರದರ್ಶನ ಮಳಗೆಗಳ್ನೂ ಸಹ ತರೆಯಲಾಗಿದ್ದು, ಸಮ್ಮೇಳನದಲ್ಲಿ ವಿವಿಧ ಸವಲತ್ತುಗಳನ್ನೂ ಸಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಅಪರ ಜಿಲ್ಲಾಧಿಕರಿ ವೀಣಾ ಬಿ.ಎನ್. ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net