ನುಡಿಜಾತ್ರೆಗೆ 25 ಕೋಟಿ ರೂ ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Conference Executive Committee Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಡಿ.20 ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲು ಕನ್ನಡದ ಎಲ್ಲ ಮನಸ್ಸುಗಳು ಒಂದಾಗಿ ಶ್ರಮಿಸಬೇಕಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿ ಆಯೋಜಿಸಿದ್ದ ಸಮ್ಮೇಳನದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸೊಗಡಿನ ಜತೆಗೆ ರಾಜ್ಯದ ಬದುಕನ್ನು ಬೆಸೆಯುವ ಸ್ವರೂಪದಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದೆ. ಇದರಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾಹಿತಿಗಳು, ಚಿಂತಕರು, ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಕಾಳಜಿ, ಪರಿಶ್ರಮ ವಹಿಸಬೇಕು ಎಂದರು.

ಸಮ್ಮೇಳನಕ್ಕೆ ಆರ್ಥಿಕ ಇಲಾಖೆಯಿಂದ 25 ಕೋಟಿ ರೂ ಬಿಡುಗಡೆಗೆ ಶಿಫಾರಸು ಮಾಡಿದೆ. ಆದಷ್ಟು ಅದರ ಇತಿ ಮಿತಿಯೊಳಗೆ ವೆಚ್ಚ ನಿಯಂತ್ರಣ ಮಾಡಿಕೊಳ್ಳುವುದು ಸೂಕ್ತ. ಸಾಹಿತ್ಯ, ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಸಂಘಟನೆ ಮಾಡಬೇಕು. ಜಿಲ್ಲಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ವ್ಯಾಪಕ ಪ್ರಚಾರ, ಉತ್ತಮ ಅಲಂಕಾರ ಮಾಡಬೇಕು. ಆಕರ್ಷಕ ಮೆರವಣಿಗೆ, ಅರ್ಥಪೂರ್ಣ ವಿಚಾರಗೋಷ್ಠಿ, ಕಾರ್ಯಕ್ರಮದ ಜತೆಗೆ ಊಟಕ್ಕೆ ಸಂಬಂಧಿಸಿದಂತೆ ಮುದ್ದೆ ಬಸ್ಸಾರು ಸೇರಿದಂತೆ ಸ್ಥಳೀಯ ಆಹಾರ ಹಾಗೂ ಉತ್ತರ ಕರ್ನಾಟಕದ ತಿನಿಸುಗಳ ಸಮಿಶ್ರಣಗೊಂಡ ಊಟೋಪಚಾರ ವ್ಯವಸ್ಥೆ ಮಾಡಬೇಕು. ಸಾಹಿತ್ಯ ಸಮ್ಮೇಳನದ ಮೊದಲೆರಡು ದಿನ ಸಂಜೆಯ ನಂತರ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಮ್ಮೇಳನಕ್ಕೆ ವಿಶೇಷ ಬಸ್ ಸಂಪರ್ಕ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಉದಯ್, ರವಿಕುಮಾರ್ ಗಣಿಗ, ಎಂಎಲ್‌ಸಿಗಳಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net