

ಶಿವಮೊಗ್ಗ: ರಾಜ್ಯ ರಾಜಧಾನಿಯಲ್ಲಿ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರನ್ನು ಒಂದೆಡೆ ಸೇರಿಸಿ ಪ್ರಚಾರ ನಡೆಸುವ ಉದ್ದೇಶದಿಂದ ಏ.14ರ ಸಂಜೆ 4ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮತದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ದೈವಜ್ಞ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಮೊಗ್ಗ ನಗರ ಜೆಡಿಎಸ್ ಘಟಕದ ಬೂತ್, ವಾರ್ಡ್ ಅಧ್ಯಕ್ಷರು ಹಾಗೂ ಪ್ರಮುಖರ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿರುವ ನಮ್ಮ ಕ್ಷೇತ್ರದ ಮತದಾರರನ್ನು ಸಮಾವೇಶಕ್ಕೆ ಆಹ್ವಾನಿಸಲು ಮೈತ್ರಿಕೂಟದಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಾನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಎಲ್ಲರೂ ಸಹಕಾರ ನೀಡಬೇಕು. ಬಿಜೆಪಿ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿತ್ತು. ಆ ಸರ್ಕಾರ ಅತ್ಯುತ್ತಮ ಆಡಳಿತ ನೀಡಿತ್ತು. ಕಾರಣಾಂತರದಿಂದ ಮೈತ್ರಿ ಮುರಿದುಬಿತ್ತು. ಈಗ ದೇಶದ ಹಿತದೃಷ್ಟಿಯಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಎನ್‌ಡಿಎ ಕೂಟ ಸೇರಿರುವುದು ಉತ್ತಮ ಬೆಳವಣಿಗೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ರಘುಪತಿ ಭಟ್, ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ಕೆ.ಎನ್.ರಾಮಕೃಷ್ಣ, ಉಮಾಶಂಕರ ಉಪಾಧ್ಯ, ಬೊಮ್ಮನಕಟ್ಟೆ ಮಂಜುನಾಥ್, ಗಂಧದಮನೆ ನರಸಿಂಹ, ತ್ಯಾಗರಾಜ್, ಎಸ್.ವಿ.ರಾಜಮ್ಮ, ಅಬ್ದುಲ್ ವಾಜೀದ್ ಇದ್ದರು.
ಅರ್ಧ ಠೇವಣಿ ಜೆಡಿಎಸ್‌ನದ್ದು!:ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರದೊಂದಿಗೆ ಚುನಾವಣೆ ಠೇವಣೆಯಾಗಿ ಪಾವತಿಸಬೇಕಿರುವ 25 ಸಾವಿರ ರೂ. ಪೈಕಿ ಅರ್ಧದಷ್ಟು (12,500 ರೂ.) ಮೈತ್ರಿ ಧರ್ಮ ಪಾಲನೆಯ ಭಾಗವಾಗಿ ಜೆಡಿಎಸ್‌ನಿಂದ ರಾಘವೇಂದ್ರ ಅವರಿಗೆ ಸಭೆಯಲ್ಲಿ ಹಸ್ತಾಂತರಿಸಿದ್ದು ವಿಶೇಷವಾಗಿತ್ತು. ಇದಕ್ಕೆ ಕೃತಜ್ಞತೆ ಸಲ್ಲಿಸಿದ ಬಿ.ವೈ.ರಾಘವೇಂದ್ರ ಜೆಡಿಎಸ್ ಕಾರ್ಯಕರ್ತರ ಪರಿಶ್ರಮದ ಫಲವಾದ ಠೇವಣಿ ಹಣವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ಇದರ ಋಣ ತೀರಿಸುತ್ತೇನೆ ಎಂದರು.
ಎರಡೂ ಪಕ್ಷಗಳಿಗೆ ಮಹತ್ವದ್ದು: ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಚುನಾವಣೆಯಲ್ಲಿ ನಾವು ಮತಯಾಚನೆ ಮಾಡುತ್ತೇವೆ. ಮೈತ್ರಿ ಪಕ್ಷಗಳಿಗೆ ಚುನಾವಣೆ ಮಹತ್ವದ್ದಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು. ನಮ್ಮ ಪಕ್ಷದ ನಾಯಕರು ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಸ್ವಾಭಿಮಾನಿ ದೇಶಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ರಾಜ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಇರುವೆಡೆ ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ನಾವು ಬಿಜೆಪಿ ಪರವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.