

ಬೆಂಗಳೂರು: ಹೆಚ್ಚಿನ ಇನ್ಸೆಂಟಿವ್ ಆಸೆಗೆ ಬಿದ್ದು ಬೇಕಾ ಬಿಟ್ಟಿಯಾಗಿ ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ಹರಿದಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕನನ್ನು ಬಿಎಂಟಿಸಿ ಅಮಾನತುಗೊಳಿಸಿದೆ.
ಘಟಕ ೧೭ರ ಮಾರ್ಗ ಸಂಖ್ಯೆ ೨೪೨ ಬಿ (ಮೆಜೆಸ್ಟಿಕ್-ತಾವರೆಕೆರೆ) ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ ಅರ್ಜುನ ಕೊಟ್ಯಾಳ ಅಮಾನತುಗೊಂಡವರು.
ಇನ್ನು ಹೆಚ್ಚಿನ ಇನ್ಸೆಂಟಿವ್ ಆಸೆಗೆ ಬಿಎಂಟಿಸಿ ಕಂಡೆಕ್ಟರೊಬ್ಬ ಬೇಕಾ ಬಿಟ್ಟಿಯಾಗಿ ಫ್ರೀ ಟಿಕೆಟ್‌ಗಳನ್ನು ಹರಿಯುತ್ತಿರುವ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗಿತ್ತು. ಇದಕ್ಕೆ ಸಂಬಂಧಪಟ್ಟ ನಿರ್ವಾಹಕರನ್ನು ಕೇಂದ್ರ ಕಚೇರಿಗೆ ಕರೆಯಿಸಿ ಉನ್ನತ ಅಧಿಕಾರಿಗಳು ತೀವ್ರ ವಿಚಾರಣೆಯನ್ನು ನಡೆಸಿದ್ದರು. ವಿಚಾರಣೆಯ ನಂತರ ಸಂಸ್ಥೆಯು ಪ್ರಕಾಶ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಾಟೆಗೆ ತೆಗೆದುಕೊಂಡಿದ್ದ ಮಹಿಳೆ:
ಬಿಬಿಎಂಟಿಸಿ ಬಸ್‌ನ ಕಂಡೆಕ್ಟರ್ ಅ.೧೫ ರಂದು ಸುಖಾಸುಮ್ಮನೇ ಫ್ರೀ ಟಿಕೆಟ್ ಹರಿದು ಬಿಸಾಕುತ್ತಿದ್ದನು. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು.