

ಮಡಿಕೇರಿ: ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಮತ್ತು ರೋಟರಿ ಜಿಲ್ಲೆ ೩೧೮೧ರವರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನದ ಪ್ರಯುಕ್ತ ಮಡಿಕೇರಿ ನಗರದ ರಾಜಾಸೀಟ್ ಮುಂಭಾಗದಲ್ಲಿ ಮತದಾನ ಜಾಗೃತಿ ಕುರಿತಾದ ಬೀದಿ ನಾಟಕ ಮತ್ತು ಕಾರು ರ‌್ಯಾಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮತದಾನ ಜಾಗೃತಿ ಕುರಿತಾಗಿ ಸಾರ್ವಜನಿಕರು ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ ೧೯೫೦, ಮತ್ತು ಸಿ.ವಿಜಿಲ್ ಆ್ಯಪ್ ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಸಂವಿಧಾನದ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಮಡಿಕೇರಿ ಉಪ ವಿಭಾಗಾಧಿಕಾರಿಗಳಾದ ವಿನಾಯಕ್ ನರ್ವಾಡೆ ಮಾತನಾಡಿ, ಮತದಾನ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಆದ್ಯ ಕರ್ತವ್ಯ. ತಮ್ಮ ಮುಂದಿನ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮ ತಂಡದವರು ಮತದಾನದ ಮಹತ್ವ ಕುರಿತು ಪ್ರಸ್ತುತಪಡಿಸಿದ ಅರ್ಥಪೂರ್ಣವಾದ ಬೀದಿ ನಾಟಕವು ಸರ್ವರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅನಂತಶಯನ, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾತಂಡ ಸುರೇಶ್, ಪೌರಾಯುಕ್ತ ವಿಜಯ್, ಕಾರ್ಯಕ್ರಮದ ಮುಖ್ಯ ಆಯೋಜಕರಾದ ರೋಟರಿ ಜಿಲ್ಲೆ ೩೧೮೧ರ ಮುಖ್ಯಸ್ಥ ವಿಶ್ವನಾಥ ಶಣೈ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಇತರರು ಇದ್ದರು.