

ಹೊಳೆಹೊನ್ನೂರು: ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ರಸ್ತೆಯಿಂದ ಸ್ವಲ್ಪ ಹಿಂದಕ್ಕೆ ಅಂಗಡಿಗಳನ್ನು ಹಿಂದಕ್ಕೆ ಇರಿಸುವಂತೆ ಪಟ್ಟಣದ ಭಗೀರಥ ಹಾಗೂ ನೃಪತುಂಗ ವೃತ್ತಗಳಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆ ಪೊಲೀಸರು ಮನವಿ ಮಾಡಿದರು.
ಎಸ್ಪಿ ಆದೇಶದಂತೆ ಸೋಮವಾರ ಪಾದಚಾರಿ ಗಸ್ತು(ಫೂಟ್ ಪ್ಯಾಟ್ರೋಲಿಂಗ್) ಅಭಿಯಾನಕ್ಕೆ ಚಾಲನೆ ನೀಡಿ, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಗಸ್ತು ನಡೆಸಿದರು. ಈ ವೇಳೆ ಸಂಚಾರಕ್ಕೆ ಅಡೆಚಣೆ ಆಗುತ್ತಿರುವ ಕಡೆಗಳಲ್ಲಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಜಾಗ ಮಾಡಿಕೊಂಡು ವ್ಯಾಪಾರ ಮಾಡಿಕೊಳ್ಳುವಂತೆ ಅಂಗಡಿಗಳ ಮಾಲೀಕರಿಗೆ ತಿಳಿಸಿದರು.
ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಗ್ರಾಮದ ಪ್ರಮುಖ ಎರಡು ಸಕರ್ಲ್‌ಗಳಲ್ಲಿ ಕೆಲ ಅಂಗಡಿಗಳು ರಸ್ತೆಗೆ ಹೊಂದಿಕೊಂಡಂತಿವೆ. ಇಕ್ಕೆಲಗಳಲ್ಲಿ ತಳ್ಳುಗಾಡಿಗಳನ್ನು ನಿಲ್ಲಿಸುವುದರಿಂದ ಪದೇಪದೆ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಬೆಳಗ್ಗೆ, ಸಂಜೆ ಓಡಾಡಲು ಕಷ್ಟವಾಗುತ್ತಿದೆ. ಪೇಟೆ ಬೀದಿಯ ಎರಡು ಕಡೆಗಳಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕುವಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡಿದರು.
ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಗೂಡಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ರಸ್ತೆಯ ಎರಡು ಕಡೆಗಳಲ್ಲಿ ತೆರೆದುಕೊಳ್ಳುವ ತಳ್ಳುಗಾಡಿಗಳಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರಕ್ಕೆ ತೊಂದರೆ ಆಗದಂತೆ ವಹಿವಾಟು ನಡೆಸಿ ಎಂದು ಕೆಲ ವ್ಯಾಪಾರಸ್ಥರಿಗೆ ಪೊಲೀಸರು ಎಚ್ಚರಿಕೆ ನೀಡಿದರು.
ಪೊಲೀಸರು ಗಸ್ತು ಬರುವುದನ್ನು ಕಂಡ ಕೆಲ ವ್ಯಾಪಾರಿಗಳು ತಾವಾಗಿಯೇ ಹಿಂದಕ್ಕೆ ಹೋಗಿ ವಹಿವಾಟು ನಡೆಸಿದರು. ಸಂಜೆ ವೇಳೆಗೆ ಪರಿಸ್ಥಿತಿ ಮತ್ತೆ ಮಾಮೂಲಿಯಾಯಿತು.
ಪಿಎಸ್‌ಐ ಚಂದ್ರಶೇಖರ್, ಎಎಸ್‌ಐ ಕೃಷ್ಣನಾಯಕ್, ಪೇದೆಗಳಾದ ಮಂಜುನಾಥ್, ಪ್ರಸನ್ನ, ಚಂದ್ರಶೇಖರ್, ಲಿಂಗೇಗೌಡ, ನಾಗರಾಜ್, ವಿಶ್ವನಾಥ್, ಆನಂದ್, ಸುದರ್ಶನ್, ಪ್ರಶಾಂತ್, ಸವಿತಾ, ಸೌಜನ್ಯಾ, ಶಿವಮ್ಮ ಇತರರಿದ್ದರು.