ಮಳೆ ಕೊರತೆ ಬೆಳೆ ಹಾನಿ ಸಮೀಕ್ಷೆ ನಡೆಸಿ

BLY- 29-3
ಬಳ್ಳಾರಿ ನಗರದ ಜಿಲ್ಲಾ ಪಂಚಾಯಿತಿಯ ನಜೀರ್‌ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಮಾತನಾಡಿದರು. ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಇದ್ದರು.
Published on

ಬಳ್ಳಾರಿ : ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಐದು ತಾಲೂಕಿನಲ್ಲಿ ಕ್ಷೇತ್ರ ಭೇಟಿ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ನಜೀರ್‌ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮಿನ ಬಿತ್ತನೆಗೆ 1,73,897 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಹೊಂದಿದ್ದು, ಅದರಲ್ಲಿ 1,08,898 ಹೆಕ್ಟೇರ್ (ಶೇ.62.62) ಗುರಿ ಸಾಧನೆಯಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 599 ಮಿ.ಮೀ ಆಗಬೇಕು. ಆದರೆ 177 ಮಿ.ಮೀ. ಮಳೆ ಆಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಭೆಗೆ ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ತ್ರಿಲೋಕ ಚಂದ್ರ ಅವರು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಪ್ರತಿ ತಾಲೂಕಿನ ಗ್ರಾಮವಾರು ಸಂಚರಿಸಬೇಕು. ಅಲ್ಲಿನ ರೈತರನ್ನು ಭೇಟಿ ಮಾಡಿ, ಬೆಳೆಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಬೇಕು. ಮಳೆಯ ಕೊರತೆಯಿಂದಾಗಿ ಬೆಳೆ ಒಣಗುತ್ತಿರುವುದರ ಬಗ್ಗೆ ಸಮೀಕ್ಷೆ ಮಾಡಬೇಕು. ಅದರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಾಗೂ ಮುಂದಾಗುವ ಹಾನಿಗೆ ಈಗಲೇ ಬೆಳೆ ವಿಮೆ ಮಾಡಿಸುವಂತೆ ರೈತರನ್ನು ಪ್ರೇರೇಪಿಸಬೇಕು. ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಂಡೂರು ತಾಲೂಕಿನಲ್ಲಿ ಮಾತ್ರ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಅದಕ್ಕಾಗಿ ಬೋರವೆಲ್‌ಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಉಳಿದ ತಾಲೂಕುಗಳಲ್ಲಿ ಕಾಲುವೆಗಳಲ್ಲಿ ಈಗಾಗಲೇ ನೀರು ಹರಿಸಲಾಗಿದ್ದು, ಕೆರೆಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ 1,266 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಬಳ್ಳಾರಿ ನಗರದಲ್ಲಿ 152 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೆಎಂಆರ್‌ಇಸಿ ಅಡಿಯಲ್ಲಿ ನಗರದಲ್ಲಿ 50 ಕಟ್ಟಡಗಳಿಗೆ ಜಾಗ ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಪ್ರತಿಕ್ರಿಯಿಸಿ, ನಗರದಲ್ಲಿನ ತೆಲುಗು ಮತ್ತು ಉರ್ದು ಶಾಲೆಗಳು ಒಳಗೊಂಡಂತೆ ಕಡಿಮೆ ವಿಧ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ 130 ಕಟ್ಟಡಗಳಲ್ಲಿ ಒಂದು ಕೊಠಡಿ ಕಾಯ್ದಿರಿಸಿ ಅದರಲ್ಲಿ ಕಾರ್ಯನಿರ್ವಹಿಸಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಎಂದು ಹೇಳಿದರು.

  • ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ
    ಜಿಲ್ಲೆಯು ಎಸ್‌ಎಸ್‌ಎಲ್‌ಸಿ ವಾರ್ಷಿಕ ಫಲಿತಾಂಶದಲ್ಲಿ ಹಿಂದುಳಿದಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕಿದೆ. ಅದಕ್ಕೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿತ ಶಿಕ್ಷಕರನ್ನು ಗುರುತಿಸಿ, ಅವರ ಜೊತೆ ಸಭೆ ನಡೆಸಿ, ಫಲಿತಾಂಶದಲ್ಲಿ ಜಿಲ್ಲೆಯನ್ನು ಮುನ್ನೆಲೆಗೆ ತರಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯ ಹಾಸ್ಟೆಲ್ಗಳಿಗೆ ಆಯಾ ಅಧಿಕಾರಿಗಳು ವಾರದಲ್ಲಿ ಭೇಟಿ ನೀಡಿ ಅಲ್ಲಿನ ಗುಣಮಟ್ಟ ಆಹಾರ, ಕಟ್ಟಡ, ಶೌಚಗೃಹ ಹಾಗೂ ಇತರ ಸಮಸ್ಯೆಗಳನ್ನು ವರದಿ ಮಾಡಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್)ದಿಂದ ಜಿಲ್ಲೆಯಲ್ಲಿ ಅನುಮೋದನೆಗೊಂಡ ಆರು ಕ್ರಿಯಾಯೋಜನೆಯಲ್ಲಿ ಇಲ್ಲಿಯವರೆಗೆ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನರೇಗಾ ಯೋಜನೆ, ಎನ್‌ಆರ್‌ಎಲ್‌ಎಂ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯ ಬಗ್ಗೆ ಚರ್ಚಿಸಿದರು.
    ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net