ಶಿಕ್ಷಣ ವಂಚಿತ ಮಕ್ಕಳ ಮರುಸಮೀಕ್ಷೆ ನಡೆಸಿ

CTD27 DC MEETING (5)
Published on

ಚಿತ್ರದುರ್ಗ: ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ, ವಿಶೇಷವಾಗಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರತಿಬಂಧ ಕಾಯ್ದೆ-1995ರಡಿ ಹಮ್ಮಿಕೊಂಡಿದ್ದ 3ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಶಾಲೆಯಿಂದ ಹೊರಗುಳಿಯಲು ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಿ, ಪರಿಹಾರ ಕ್ರಮಗಳೊಂದಿಗೆ ಅವರನ್ನು ಶಾಲೆಗೆ ಕರೆತರಬೇಕು. ಜಿಲ್ಲೆಯಲ್ಲಿ 271 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮೀಕ್ಷೆಯಲ್ಲೂ 204 ಮಕ್ಕಳು ಪತ್ತೆಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆಗಳು, ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡು ತಂಡದಿಂದ ಮರು ಸಮೀಕ್ಷೆ ನಡೆಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಪೈಕಿ, ಎಸ್ಸಿ, ಎಸ್ಟಿ ಮಕ್ಕಳ ಸಂಖ್ಯೆ ಎಷ್ಟು ಎಂಬುದನ್ನು ನಿಖರವಾಗಿ ತಿಳಿಯಬೇಕು. ಮನೆಯಲ್ಲಿ ತೊಂದರೆ ಇದ್ದರೆ ಮಕ್ಕಳನ್ನು ವಸತಿ ಶಾಲೆ, ಹಾಸ್ಟೆಲ್‌ಗಳಿಗೆ ಸೇರಿಸಬೇಕು. ಪಾಲಕರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲು ನೆರವಾಗಬೇಕು. ಬಾಲಕಾರ್ಮಿಕರನ್ನು ಪತ್ತೆಗೆ ಮಾಡಬೇಕು ಎಂದರು.

ಎಸ್ಸಿ-ಎಸ್ಟಿ ವಿದ್ಯಾರ್ಥಿ ವೇತನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ವಿಶೇಷ ಅಭಿಯಾನ ನಡೆಸಬೇಕು. ಖಾಸಗಿ ಶಾಲೆ-ಕಾಲೇಜುಗಳ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸಂಖ್ಯೆ ಸಂಗ್ರಹಿಸಿ ಎಲ್ಲರೂ ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಖಾಸಗಿ ಶಾಲೆಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸಬೇಕೆಂದು ಡಿಸಿ ತಿಳಿಸಿದರು.

ಎಸ್ಸಿ, ಎಸ್ಟಿ ಸಮುದಾಯದ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

ಎಎಸ್‌ಪಿ ಕುಮಾರಸ್ವಾಮಿ ಮಾತನಾಡಿ, ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಜಿಲ್ಲೆಯಲ್ಲಿ 14 ಪ್ರಕರಣಗಳು ದಾಖಲಾಗಿವೆ. 6 ಪ್ರಕರಣಗಳ ತನಿಖೆ ಮುಗಿದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನೊಂದವರಿಗೆ ಪರಿಹಾರ ನೀಡಲು ಎಲ್ಲ ಪ್ರಕರಣಗಳ ಪ್ರಾಥಮಿಕ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಉಪನಿರ್ದೇಶಕ ಜಗದೀಶ್‌ಹೆಬ್ಬಳ್ಳಿ ಮಾತನಾಡಿ, 35 ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 69 ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲೆ ಯಲ್ಲಿ 88 ಪ್ರಕರಣಗಳು ಬಾಕಿ ಇವೆ. ಪರಿಹಾರ ಧನ ವಿತರಣೆಗೆ ಅನುದಾನದ ಕೊರತೆ ಇಲ್ಲವೆಂದು ತಿಳಿಸಿದರು.

ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿದೇಶಕ ಬಿ.ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ ಅರ್.ಬಣಕಾರ್ ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಒ.ಪರಮೇಶ್ವರಪ್ಪ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಡಿ.ಒ.ಮೊರಾರ್ಜಿ, ಗುಜ್ಜಾರಪ್ಪ, ಹೇಮಗೌಡ, ಒ.ಚಿನ್ನಪ್ಪ ಹಾಗೂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net