

ಮುಧೋಳ: ನಿಯಮಾವಳಿ ಪ್ರಕಾರ ಸಭೆ ನಡೆಸುತ್ತಿಲ್ಲ ಎಂದು ನಗರಸಭೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಮಂಗಳವಾರ ನಡೆಯಿತು.
ನಗರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಅವುಗಳನ್ನು ಚರ್ಚಿಸಿ ಮಾರ್ಗೋಪಾಯ ಕಂಡುಕೊಳ್ಳುವ ಚರ್ಚೆಗಳು ಪ್ರತಿಪಕ್ಷದ ಸದಸ್ಯರ ಸಭಾ ತ್ಯಾಗದಿಂದ ಹಾಗೆ ಉಳಿದುಕೊಂಡವು.
ಅಧಿಕಾರಿಗಳ ದುರ್ವರ್ತನೆ, ತತ್ಸಾರ ಮನೋಭಾವದಿಂದ ನಮಗೆ ನೋವಾಗಿದೆ. ನಗರಸಭೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುತ್ತಿದೆ ಬಿಜೆಪಿ ಸದಸ್ಯ ಗುರುಪಾದ ಕುಳಲಿ ಸ್ಪಷ್ಟನೆ ನೀಡಿದರು.
ಬೆಳಗ್ಗೆ 11.30ಕ್ಕೆ ಆರಂಭಗೊಳ್ಳಬೇಕಿದ್ದ ಸಭೆಗೆ ಆಗಮಿಸಿದ್ದ ಬಿಜೆಪಿ ಸದಸ್ಯರು ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭಾಂಗಣದಿಂದ ಹೊರಬಂದರು. ಸಭಾತ್ಯಾಗ ಮಾಡಿದವರ ಮನವೊಲಿಕೆ ಆಡಳಿತ ಪಕ್ಷದ ಸದಸ್ಯರು ಮುಂದಾದರಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅಧ್ಯಕ್ಷೆ ಸುನಂದಾ ತೇಲಿ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ ಎಂದರು.
ಬಳಿಕ ಅಧ್ಯಕ್ಷರ ಕೊಠಡಿಯಲ್ಲಿ ನಗರಸಭೆ ಸದಸ್ಯರು, ಆಯ್ದ ಅಧಿಕಾರಿಗಳು ಮಾತ್ರ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಸಭಾತ್ಯಾಗ ಮಾಡಿದ ಸದಸ್ಯರೆಲ್ಲರೂ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಮಾತುಕತೆಯಲ್ಲಿ ಪಾಲ್ಗೊಂಡು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿರುವುದು ಕಂಡುಬಂದಿತು.
ಸಾಮಾನ್ಯ ಸಭೆಗೆ ಮಾಧ್ಯಮಗಳಿಗೆ ಆಹ್ವಾನ ನೀಡಿದ ನಗರಸಭೆ ಆಡಳಿತ ಮಂಡಳಿ ಸದಸ್ಯರು ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಮಾತುಕತೆ ವೇಳೆ ಸುದ್ದಿಗಾರರನ್ನು ದೂರವಿಟ್ಟಿದ್ದರು.
ನಿಯಮಾವಳಿ ಪ್ರಕಾರ ನಮಗೆ ಸಾಮಾನ್ಯ ಸಭೆಯ ಸೂಚನೆ ನೀಡಿಲ್ಲ. ಸಭೆ ನಡೆಯುವ ಒಂದು ವಾರದ ಮೊದಲೇ ನಮಗೆ ಸೂಚನೆ ನೀಡಬೇಕು. ಆದರೆ, ಅಧಿಕಾರಿಗಳು ಕೇವಲ ಎರಡು ದಿನದ ಹಿಂದೆ ನಮಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ನಾವು ಸಭೆ ಬಹಿಷ್ಕರಿಸಿದ್ದೇವೆ.
ಗುರುಪಾದ ಕುಳಲಿ, ಬಿಜೆಪಿ ನಗರಸಭೆ ಸದಸ್ಯ
...............................................