

ರಾಯಚೂರು: ಲೋಕಸಭೆ ಚುನಾವಣೆಯ ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ವಿವಿಧ ಹಂತದ ಅಕಾರಿಗಳು ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅಚ್ಚುಕಟ್ಟಾಗಿ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಚುನಾವಣೆ ಆಯೋಗ ನಿಮಗೆ ಸೇವೆ ಮಾಡಲು ಅವಕಾಶವನ್ನು ನೀಡಿದೆ. ಉತ್ಸಾಹ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮಹಿಳೆಯರು ಹೆದರದೆ ತಮಗೆ ನೀಡಿರುವ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ವರ್ಮಾ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಡಿಡಿಪಿಐ ಕೆ.ಡಿ.ಬಡಿಗೇರ, ಬಿಇಒ ಚಂದ್ರಶೇಖರ ಭಂಡಾರಿ, ತರಬೇತುದಾರ ಸದಾಶಿವಪ್ಪ, ದಂಡಪ್ಪ ಬಿರಾದರ ಉಪಸ್ಥಿತರಿದ್ದರು.