ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ

25HSN5
Published on

ಹಾಸನ: ಮಾ. 4 ರಿಂದ 23ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ಕೊಡದಂತೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾದ್ಯಂತ 30 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, 7,731 ಬಾಲಕರು, 9,632 ಬಾಲಕಿಯರು ಸೇರಿ 17,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 15,231 ಹೊಸಬರು, 1,521 ಪುನರಾವರ್ತಿತ, 611 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಎಲ್ಲ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದರು.

ಸಿಸಿಟಿವಿ ಕ್ಯಾಮರಾ ಕಣ್ಗಾವಲು: ಪರೀಕ್ಷಾ ಕೇಂದ್ರಗಳಲ್ಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಪರಿಶೀಲಿಸಿ ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಬೇಕು. ಕೇಂದ್ರಗಳ ಸುತ್ತ 200 ಮೀ. ನಿರ್ಬಂಧಿತ ಪ್ರದೇಶವೆಂದು ಘೋಷಿಸಬೇಕು. ಅಕ್ಕ-ಪಕ್ಕದ ಜೆರಾಕ್ಸ್ ಅಂಗಡಿ, ಟ್ಯೂಷನ್ ಸೆಂಟರ್ ಹಾಗೂ ಸೈಬರ್ ಕೇಂದ್ರಗಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.

ಪರೀಕ್ಷೆಯನ್ನು ಕರ್ನಾಟಕ ಸೆಕ್ಯೂರ್ ಎಕ್ಸಾಮ್ ಸಿಸ್ಟಮ್ ಅಡಿಯಲ್ಲ್ಲಿ ನಡೆಸಲಾಗುತ್ತಿದೆ. ಜಿಲ್ಲಾ ಖಜಾನೆಯ ಸ್ಟ್ರಾಂಗ್ ರೂಂ ಹಾಗೂ ಮುಖ್ಯ ದ್ವಾರದ ಬಳಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದರ ಜತೆಗೆ ಪೊಲೀಸ್ ಭದ್ರತೆಯಲ್ಲಿರಬೇಕು. ಪ್ರಶ್ನೆ ಪತ್ರಿಕೆಗಳ ಗೌಪ್ಯ ಲಕೋಟೆಗಳನ್ನು ಸುರಕ್ಷಿತವಾಗಿಡಬೇಕು. ಅದನ್ನು ವಿತರಿಸುವಾಗ ಜಿಲ್ಲಾ ಮಟ್ಟದ ತ್ರಿಸದಸ್ಯ ಸಮಿತಿಯವರ ಸಮ್ಮುಖದೊಂದಿಗೆ ಬಯೋಮೆಟ್ರಿಕ್ ನೋಂದಣಿ ವ್ಯವಸ್ಥೆಯ ಮೂಲಕ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಧೀಕ್ಷಕರು ಮಾತ್ರ ಮೊಬೈಲ್ ಬಳಸಿ: ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯುವ ಪ್ರತಿ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ನಿರ್ದೇಶನ ನೀಡಿದರು.

ಪರೀಕ್ಷಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಪ್ರವೇಶಿಸುವಂತಿಲ್ಲ. ಕಾರ್ಯ ನಿರ್ವಹಿಸುವ ಎಲ್ಲರೂ ಗುರುತಿನ ಪತ್ರ ಧರಿಸಿರಬೇಕು. ಮೊಬೈಲ್ ಹಾಗೂ ಇತರ ವಿದ್ಯುನ್ಮಾನ ಉಪಕರಣಗಳನ್ನು ಬಳಸುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಬಳಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಶ್ನೆ ಪತ್ರಿಕೆಗಳ ಗೌಪ್ಯ ಲಕೋಟೆಗಳ ಬಾಕ್ಸ್‌ಗಳನ್ನು ಬೆಳಗ್ಗೆ 9.45ಕ್ಕೆ ತೆರೆಯುವಾಗ ಮುಖ್ಯ ಅಧೀಕ್ಷಕರು, ಸಹಮುಖ್ಯ ಅಧೀಕ್ಷಕರು, ಜಾಗೃತದಳ ಸಿಬ್ಬಂದಿ ಇರಬೇಕು. ಜತೆಗೆ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಬೇಕು. ಪರೀಕ್ಷೆ ಮುಕ್ತಾಯ ಅವಧಿಗೆ ಅರ್ಧ ಗಂಟೆ ಮುಂಚೆಯೇ ಪರೀಕ್ಷಾ ಕೊಠಡಿಯಿಂದ ಯಾವ ವಿದ್ಯಾರ್ಥಿಗಳು ಹೊರ ಹೋಗದಂತೆ ಹಾಗೂ ಕಡ್ಡಾಯವಾಗಿ ಪರೀಕ್ಷೆ ಮುಗಿಯುವ ವರೆಗೂ ಕೊಠಡಿಯಲ್ಲಿರುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಪರೀಕ್ಷಾ ಕೊಠಡಿಯಲ್ಲಿ ಗಡಿಯಾರ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದರು. ತಹಸೀಲ್ದಾರರು ಮತ್ತು ಪ್ರಾಂಶುಪಾಲರು ಪೊಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ವಾಹನದ ಮೂಲಕ ಉತ್ತರ ಪತ್ರಿಕೆಗಳನ್ನು ಪೋಸ್ಟ್ ಆಫೀಸ್‌ಗೆ ತಲುಪಿಸುವಂತೆ ಸೂಚನೆ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಜವರಯ್ಯ ಹಾಗೂ ಎಲ್ಲ ತಾಲೂಕಿನ ತಹಸೀಲ್ದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net