

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಚಿಂಚೋಳಿಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚುವಂತೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿಗೊಳಿಸಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ಸಿದ್ಧಸಿರಿ ಸೌಹಾರ್ದದ ಮೇಲೂ ಅನುಮಾನ ಹೆಚ್ಚಾಗಿದ್ದು, ಗ್ರಾಹಕರಲ್ಲಿ ಭಯ ಶುರುವಾಗಿದೆ. ಹೀಗಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಶಿವಸೇನೆ ಮುಖಂಡ ಸತೀಶ ಪಾಟೀಲ ಒತ್ತಾಯಿಸಿದ್ದಾರೆ.
ಶಾಸಕ ಯತ್ನಾಳರ ಯಾವ ಯೋಜನೆಗಳೂ ಸಫಲವಾಗಲ್ಲ; ಎಲ್ಲವೂ ಲಾಸ್ ಇಲ್ಲವೇ ದಿವಾಳಿಯಾಗುವ ಲಕ್ಷಣಗಳೇ ಇರುತ್ತವೆ. ಈ ಹಿಂದೆ ಸಿದ್ಧಸಿರಿ ಹಾಲು ಮಾರಾಟದ ಯೋಜನೆ ಜಾರಿ ತಂದಿದ್ದರು, ಬಳಿಕ ಆ ಎಮ್ಮೆಗಳು ಪರಾರಿಯಾದವು ! ಇನ್ನೂ ಅನೇಕ ಘಟನೆಗಳು ಶಾಸಕ ಯತ್ನಾಳರ ವೈಫಲ್ಯವನ್ನು ಎತ್ತಿ ತೋರಿಸುತ್ತವೆ.
ಹೀಗಾಗಿ ಸಿದ್ಧಸಿರಿಯಲ್ಲಿ ಠೇವಣಿ ಇರಿಸಿದ ಗ್ರಾಹಕರಲ್ಲಿ ಆತಂಕ ಮನೆ ಮಾಡಿದ್ದು, ಕಾರ್ಖಾನೆಯನ್ನು ನಂಬಿ ಬದುಕು ಸಾಗಿರುವ ರೈತರಲ್ಲೂ ಆತಂಕವಿದೆ.
ಡಲೇ ಶಾಸಕರು ಸ್ಪಷ್ಟೀಕರಣ ನೀಡಿ ಆತಂಕ ಮತ್ತು ಗೊಂದಲ ನಿವಾರಿಸಬೇಕೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಅತ್ಯಂತ ಹಿಂದುಳಿದ ಜಿಲ್ಲೆಯಾದರೂ ವಿಜಯಪುರದಲ್ಲಿ ಕಾರ್ಖಾನೆ ಆರಂಭಿಸದ ಯತ್ನಾಳ ಕಲಬುರಗಿಯ ಚಿಂಚೋಳಿಯಂಥ ದೂರದ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಕಾರ್ಖಾನೆ ಖರೀದಿಸಿ ಸರ್ಕಾರದ ನಿಯಮ ಉಲ್ಲಂಘಿಸಿ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯದಾಗಿದೆ.
ಜಿಲ್ಲೆಯಲ್ಲಿಯೇ ಸ್ಥಾಪಿಸಿದ್ದರೆ ಸಾಕಷ್ಟು ಜನರಿಗೆ ಉದ್ಯೋಗವಕಾಶವಾದರೂ ಸಿಗುತ್ತಿತ್ತು. ಬೂದಿ ಮುಚ್ಚಿದ ಕೆಂಡದಂತಿರುವ ಯತ್ನಾಳರ ನಡೆ ಹಾಗೂ ನಿರ್ಧಾರಗಳ ಬಗ್ಗೆ ಜನರಿಗೆ ಸ್ಪಷ್ಟತೆ ಸಿಗಬೇಕಿದೆ. ಸಿದ್ಧಸಿರಿಯಲ್ಲಿ ಮೋಸದ ಸಂಶಯ ಎದ್ದು ಕಾಣುತ್ತಿದೆ.
ಗ್ರಾಹಕರು ಭರವಸೆ ಕಳೆದುಕೊಳ್ಳುವ ಮುನ್ನವೇ ಸಹಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೂಡ ಸಿದ್ಧಸಿರಿ ಸೌಹಾರ್ದದ ತನಿಖೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಒತ್ತಾಯಿಸಲಾಗುವುದೆಂದರು.
ತಾವು ಮಾಡುವ ಎಲ್ಲ ಅನಾಚಾರಗಳಿಗೆ ಹಿಂದುತ್ವ, ಜಾತಿಯ ಟ್ರಂಪ್ ಕಾರ್ಡ್ ಬಳಸುವ ಯತ್ನಾಳರು ಇದೀಗ ಸಕ್ಕರೆ ಕಾರ್ಖಾನೆ ವಿಷಯದಲ್ಲಿ ರೈತರ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ರೈತರ ಹಿತಾಸಕ್ತಿ ಇದ್ದರೆ ನಿಯಮಾವಳಿ ಅನುಸರಿಸಬೇಕಿತ್ತಲ್ಲವೇ? ಎಂದು ಪಾಟೀಲ ಪ್ರಶ್ನಿಸಿದರು.
ಕೇವಲ ಹೊಂದಾಣಿಕೆ ರಾಜಕಾರಣ, ಸ್ವಹಿತಾಸಕ್ತಿಗಾಗಿ ಕಾರ್ಯಕರ್ತರ ಕಗ್ಗೊಲೆ ಮಾಡುತ್ತಿರುವ, ಅವಕಾಶ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸುವ ಯತ್ನಾಳರಿಂದ ಯಾವುದೇ ಹಿಂದುತ್ವ ಹಾಗೂ ಪಕ್ಷ ಸಿದ್ಧಾಂತ ಉಳಿಯಲು ಸಾಧ್ಯವಿಲ್ಲ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವರ ಹೊಂದಾಣಿಕೆಯಿಂದಾಗಿ ಪಕ್ಷಕ್ಕೆ ಅಧಿಕಾರ ಕೈ ತಪ್ಪಿತು. ಮಾತೆತ್ತಿದರೆ ಸ್ಟಾರ್ ಕ್ಯಾಂಪೇನರ್ ಎಂದು ಬೀಗುವ ಈ ಯತ್ನಾಳ ಅವರು ಪ್ರಚಾರ ಮಾಡಿದ ಯಾವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದೆ ಹೇಳಿ? ತಮ್ಮದೇ ಹಿಂಬಾಲಕರನ್ನು ಕಟ್ಟಿಕೊಂಡು ಸಮಸ್ಯೆ ಬಂದಾಗಲೆಲ್ಲ ಹಿಂದುತ್ವ ಜಪ ಮಾಡುತ್ತಾರೆ.
ಈ ಹಿಂದೆ ವಾರಕ್ಕೊಂದು ಪ್ರಶ್ನೆ ಎನ್ನುತ್ತಾ ರಸ್ತೆಗಳ ಮಧ್ಯದಲ್ಲಿ ಸಸಿ ನೆಟ್ಟು ಹೋರಾಡುತ್ತಿದ್ದ ಭೂಪ ಈಗ ಎಲ್ಲಿದ್ದಾನೆ? ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸೇನೆ ಕಟ್ಟಿ ಆ ಮಹಾತ್ಮರನ್ನೂ ಅವಮಾನಿಸುತ್ತಿದ್ದಾರೆ. ಈಗ ಹದಗೆಟ್ಟ ರಸ್ತೆಯಲ್ಲಿ ಸಸಿ ನೆಡಬೇಕಿತ್ತು ನೋಡೋಣ ಎಂದು ರಾಘವ ಅಣ್ಣಿಗೇರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಒಟ್ಟಿನಲ್ಲಿ ಸರ್ಕಾರ ಕಾರ್ಖಾನೆಗೆ ನೋಟಿಸ್ ನೀಡಿದ್ದು, ಇಥೆನಾಲ್ ಘಟಕ ಬಂದ್‌ಗೊಳಿಸಿದ್ದು ಅಸಹ್ಯ ಮತ್ತು ಅವಮಾನಕರ. ಇನ್ನಾದರೂ ಶಾಸಕರು ದಾಖಲೆಗಳಿದ್ದರೆ ಸರ್ಕಾರಕ್ಕೆ ಒಪ್ಪಿಸಿ ಕೂಡಲೇ ಕಾರ್ಖಾನೆ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದರು.
ಮುಖಂಡ ಶ್ರೀಧರ ಪೂಜಾರಿ ಇದ್ದರು.