

ಕೆ.ಎಂ ದೊಡ್ಡಿ: ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜಯಕುಮಾರ್ ಸಜೀವ ದಹನ ಪ್ರಕರಣ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.
ಮದ್ದೂರು-ಮಳವಳ್ಳಿಯ ಮುಖ್ಯ ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು ಹಾಗೂ ಹೋರಾಟಗಾರರು ರಸ್ತೆತಡೆ ನಡೆಸಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಪ್ರೊ.ಬಿ.ಬೋರೇಗೌಡ, ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್‌ನನ್ನು ಹುಲ್ಲಿನ ಮೆದೆಯೊಂದಿಗೆ ಜೀವಂತವಾಗಿ ಸುಟ್ಟು ಹಾಕಲಾಗಿದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು. ಸರ್ಕಾರ ಮಧ್ಯೆ ಪ್ರವೇಶಿಸಿ ಜಯಕುಮಾರ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಪೊಲೀಸರ ನಿರ್ಲಕ್ಷೃದಿಂದ ಬಾಲಕಿ ಸಾವು
ಮದ್ದೂರು ತಾಲೂಕಿನ ಗೋರವನಹಳ್ಳಿಯ ವಾಣಿ ಹಾಗೂ ಮಹೇಶ್ ದಂಪತಿಯ 3 ವರ್ಷದ ಪುತ್ರಿ ಹೃತೀಕ್ಷಾಳಿಗೆ ನಾಯಿ ಕಚ್ಚಿತ್ತು. ಚಿಕಿತ್ಸೆ ಕೊಡಿಸಲು ಮಂಡ್ಯಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಸಂಚಾರಿ ಪೊಲೀಸರು ಬೈಕ್ ತಡೆದು ತಪಾಸಣೆ ನಡೆಸುವ ವೇಳೆ ಅಪಘಾತ ಸಂಭವಿಸಿ ಮಗು ಮೃತಪಟ್ಟಿತು. ಇದು ಪೊಲೀಸರ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಪುಟ್ಟ ಮಗು ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಒದಗಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮದ್ದೂರು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಕೆ.ಕಬ್ಬಾಳಯ್ಯ, ಅಣ್ಣೂರು ಮಹೇಂದ್ರ, ಕ್ಯಾತಘಟ್ಟ ರವಿಕುಮಾರ್, ತೊರೆಚಾಕನಹಳ್ಳಿ ಶಂಕರೆಗೌಡ, ಚಿಕ್ಕರಸಿನಕರೆ ಮೂರ್ತಿ, ಕರಡಕೆರೆ ಯೋಗೇಶ್, ಭರತೇಶ್, ಬಿದರಹಳ್ಳಿ ಹನುಮೇಶ್, ಮಹಿಳಾ ಮುಖಂಡರಾದ ಡಿ.ಕೆ.ಲತಾ, ಶೋಭಾ, ದೇವಿರಮ್ಮ, ಬಸವರಾಜು, ಅಪ್ಪು ಇತರರು ಇದ್ದರು.