ಕೊಳ್ಳೇಗಾಲ: ತಾಲೂಕಿನ ಅರೇಪಾಳ್ಯ ಸಮೀಪವಿರುವ ಹೊನ್ನೆ ಹುಡೆ ಮಹದೇಶ್ವರ ದೇವಸ್ಥಾನ ಪ್ರದೇಶದ ಜಂಟಿ ಮೋಜಣಿ (ಸರ್ವೇ) ಮಾಡಿ ಗಡಿ ಗುರುತಿಸಿ ಕೊಡುವಂತೆ ಉಪ ವಿಭಾಗಾಧಿಕಾರಿಗೆ ನ.27 ರಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವಲಯ ಅರಣ್ಯ ಅಧಿಕಾರಿಗಳು ಮನವಿ ಪತ್ರ ನೀಡಿದ್ದಾರೆ.
ಕೊಳ್ಳೇಗಾಲ ವನ್ಯಜೀವಿ ವಲಯದ ಅರೇಪಾಳ್ಯ ಶಾಖೆಯ ಅರೇಪಾಳ್ಯ ಗಸ್ತಿಗೆ ಸೇರಿದ ಹೊನ್ನಹುಡೆ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ನ.26ರಂದು ಮುಚ್ಚಿಹೋಗಿದ್ದ ಆನೆ ತಡೆ ಕಂದಕ ನಿರ್ವಹಣೆ ಕಾಮಗಾರಿಯನ್ನು ನಡೆಸುವ ಸಮಯದಲ್ಲಿ ಸುಮಾರು 150 ರಿಂದ 200 ಜನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದು. ಕೆಲಸ ನಿಲ್ಲಿಸುವಂತೆ ಹಾಗೂ ಸ್ಥಳವು ಕಂದಾಯ ಇಲಾಖೆಗೆ ಸೇರಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳು ಈ ಸ್ಥಳವು ಆರಣ್ಯ ಇಲಾಖೆಗೆ ಸೇರಿರುವುದಾಗಿ ಮನವರಿಕೆ ಮಾಡಿದಾಗಿಯೂ ಒಪ್ಪದೇ ಕೆಲವು ವ್ಯಕ್ತಿಗಳು ಆವೇಶದಿಂದ ಕೂಗಾಡಿದ್ದಾರೆ. ನಂತರ ಸ್ಥಳೀಯ ಮುಖಂಡರೆಲ್ಲರೂ ಸೇರಿ ಒಮ್ಮತದಿಂದ ಜಂಟಿ ಸರ್ವೇ ಮಾಡಿಸಲು ಹಾಗೂ ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ತೀರ್ಮಾನಿಸಿದ್ದಾರೆ.
ಆದ್ದರಿಂದ ಅರಣ್ಯ ಇಲಾಖೆಯ ವಶಕ್ಕೆ ಸೇರಿರುವ ಅರೇಪಾಳ್ಯ ಶಾಖೆಯ ಅರೇಪಾಳ್ಯ ಗಸ್ತಿಗೆ ಸೇರಿದ ಹೊನ್ನಹುಡೆ ಮಹದೇಶ್ವರ ದೇವಸ್ಥಾನ ವ್ಯಾಪ್ತಿಯ ಪ್ರದೇಶವನ್ನು ಜಂಟಿ ಮೋಜಣಿ ಮಾಡಿಸಲು ತಾವು ಅಗತ್ಯ ಕ್ರಮಕೈಗೊಳ್ಳಬೇಕಾಗಿ ಉಪವಿಭಾಗಧಿಕಾರಿ ಬಿ.ಆರ್.ಮಹೇಶ್ ಅವರಿಗೆ ವಲಯ ಅರಣ್ಯಧಿಕಾರಿ ಲಿಖಿತ ಪತ್ರ ನೀಡಿ ಮನವಿ ಮಾಡಿದ್ದಾರೆ.