

ಶೃಂಗೇರಿ: ಉಡುಪಿ ಖಾಸಗಿ ನರ್ಸಿಂಗ್ ಕಾಲೇಜಿನ ಶೌಚಗೃಹದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರ ತಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಒತ್ತಾಯಿಸಿದರು.
ಶನಿವಾರ ಕಟ್ಟೇಬಾಗಿಲಿನಲ್ಲಿ ತಾಲೂಕು ಬಿಜೆಪಿ ಯುವಮೋರ್ಚಾದಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳ ಮಾನ ಹಾಗೂ ಪ್ರಾಣದ ಪ್ರಶ್ನೆಯಾದ ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆಸಬೇಕು. ಹಿಂದು ಸಂಘಟನೆಗಳು ಹಲವು ವರ್ಷಗಳಿಂದ ಲವ್‌ಜಿಹಾದ್ ವಿರುದ್ಧ ಧ್ವನಿ ಎತ್ತುತ್ತಿದ್ದರೂ ನಿರ್ಲಕ್ಷ್ಯಮಾಡಲಾಗುತ್ತಿತ್ತು ಎಂದರು.
ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ವಿದ್ಯಾರ್ಥಿನಿಯರ ಪರ ಧ್ವನಿ ಎತ್ತಿದವರನ್ನು ಬಂಧಿಸಿ ಸಂವಿಧಾನದ ಆಶಯ ಬುಡಮೇಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಶ್ರೇಯಸ್ ಕವಿಲುಕೊಡಿಗೆ, ತಾಲೂಕು ಬಿಜೆಪಿ ಯುವ ಮೋರ್ಚಾದ ಸುನೀಲ್ ಸಂಪೇಕೊಳಲು, ಪದಾಧಿಕಾರಿ ಅನಿರುದ್ಧ್, ಪಪಂ ಮಾಜಿ ಅಧ್ಯಕ್ಷ ಹರೀಶ್ ವಿ.ಶೆಟ್ಟಿ, ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್, ಜಿಪಂ ಮಾಜಿ ಸದಸ್ಯೆ ಶಿಲ್ಪಾ ರವಿ, ಬಿಜೆಪಿ ಮುಖಂಡರಾದ ದಿವೀರ್ ಮಲ್ನಾಡ್, ಮಂಜುನಾಥ್ ಆನೆಗುಂದ, ಎಚ್.ಎಸ್.ಸುಬ್ರಹ್ಮಣ್ಯ, ಕೃಷ್ಣಮೂರ್ತಿ ಇದ್ದರು.