ಹಿರಿಯ ರಂಗಕರ್ಮಿ ಡಾ.ನ.ರತ್ನಗೆ ಸುತ್ತೂರು ಶ್ರೀ ಸಂತಾಪ

mysore
Published on

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾಜಿ ನಿರ್ದೇಶಕ, ಹಿರಿಯ ರಂಗಕರ್ಮಿ ಡಾ.ನ.ರತ್ನ ಅವರ ನಿಧನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.


ರತ್ನ ಅವರು ಮೈಸೂರು ವಿಶ್ವವಿದ್ಯಾಲಯದ ಬಿ.ಇಡಿ. ಪದವೀಧರರಾದ ನಂತರ ನ್ಯೂಯಾರ್ಕಿನ ಹಂಟರ್ ವಿಶ್ವವಿದ್ಯಾಲಯದಿಂದ ಅಂಧರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂ.ಎಸ್., ವಾಷಿಂಗ್ಟನ್ ಡಿ.ಸಿ.ಯ ಗಡಾಲೆಟ್ ವಿಶ್ವವಿದ್ಯಾಲಯದಿಂದ ಸ್ಪೀಚ್ ಆ್ಯಂಡ್ ಹಿಯರಿಂಗ್‌ನಲ್ಲಿ ಎಂಎಟಿ ಹಾಗೂ ಅಮೆರಿಕದ ಬ್ಲೂಮಿಂಗ್‌ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರಾಗಿ ಸಂಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. ಅವರ ವಿದ್ಯಾರ್ಥಿಗಳಾಗಿದ್ದವರು ಇಂದು ದೇಶದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಹೈದರಾಬಾದ್‌ನ ಅಲಿ ಯಾವರ್ ಜಂಗ್ ಇನ್‌ಸ್ಟಿಟ್ಯೂಟ್ ಆಫ್ ಹಿಯರಿಂಗ್ ಸಂಸ್ಥೆಯಲ್ಲಿಯೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ದೆಹಲಿ, ಬಿಹಾರ ಮುಂತಾದ ರಾಜ್ಯಗಳಲ್ಲೂ ಕೆಲಸ ನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ರಚಿಸಿದ್ದ ‘ಶಾಂತಿ ಕುಟೀರ’ ನಾಟಕ ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಿದ್ದರು ಎಂದು ಶ್ರೀಗಳು ಸ್ಮರಿಸಿದ್ದಾರೆ.


ಮೈಸೂರಿನ ಸಮತೆಂತೋ ರಂಗತಂಡವನ್ನು ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದಿದ್ದರು. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಅವರದ್ದೆ ಆದ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು. ಚಲನಚಿತ್ರಗಳಲ್ಲೂ ನಟಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಎಂ.ಎನ್. ರಾಯ್ ಪ್ರಶಸ್ತಿ, ಹೆಲೆನ್ ಕೆಲ್ಲರ್ ಪ್ರಶಸ್ತಿ ಮೊದಲಾದ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ಲಭಿಸಿದ್ದವು ಎಂದು ಸ್ಮರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net