ಸಿಡಿಲು ಬಡಿದು ಮೃತಪಟ್ಟಾತನ ಕುಟುಂಬಕ್ಕೆ ಸಾಂತ್ವನ

RTL BANAKAR
Published on

ರಟ್ಟಿಹಳ್ಳಿ: ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದ ತಾಲೂಕಿನ ಕುಡುಪಲಿ ಗ್ರಾಮಕ್ಕೆ ಮಂಗಳವಾರ ಶಾಸಕ ಯು.ಬಿ. ಬಣಕಾರ ಮತ್ತು ತಹಸೀಲ್ದಾರ್ ಶ್ವೇತಾ ಅಮರಾವತಿ ಭೇಟಿ ನೀಡಿ ಪರಿಶೀಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸುನೀಲಕುಮಾರ ಸುರೇಶಪ್ಪ ಕಾಳೇರ (29) ಮೃತಪಟ್ಟವ. ಸುನೀಲಕುಮಾರ ಸೋಮವಾರ ಬೆಳಗ್ಗೆ 11 ಗಂಟೆಗೆ ಗ್ರಾಮದ ವಿಶ್ವನಾಥ ಮಹಾರುದ್ರಪ್ಪ ಅರ್ಕಚಾರಿ ಅವರ ಜಮೀನು ಅಳತೆ ಮಾಡಿ ಕಲ್ಲು ಗೂಟ ಹಾಕಲು ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಏಕಾಏಕಿ ಗುಡುಗು ಸಿಡಿಲು ಸಮೇತವಾಗಿ ವಿಪರೀತ ಮಳೆ ಆರಂಭವಾಗಿದ್ದರಿಂದ ಕೆಲಸ ನಿಲ್ಲಿಸಿ ಜಮೀನಿನಲ್ಲಿ ನಡೆದುಕೊಂಡು ಮನೆಗೆ ವಾಪಸಾಗುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತ ಸುನೀಲಕುಮಾರ ತಂದೆ ಸುರೇಶಪ್ಪ ರಟ್ಟಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ಸುನೀಲಕುಮಾರ ಸುರೇಶಪ್ಪ ಕಾಳೇರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಶ್ವೇತಾ ಅಮರಾವತಿ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net