ನಿರೂಪಣೆಗೆ ಅಪರ್ಣಾ ಹೊಸ ಮೆರುಗು: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

Condolences to anchor Aparna Mandya
Published on

ಮಂಡ್ಯ: ಕನ್ನಡ ಮನಸ್ಸುಗಳಿಗೆ ಅಪರ್ಣಾ ನಿರೂಪಣೆಯಿಂದಲೇ ಮೋಡಿ ಮಾಡಿ ಜನಮನ ಸೆಳೆದಿದ್ದರು ಎಂದು ಅಸೋಷಿಯೇಷನ್ ಆ್ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಗಾಂಧಿಭವನದಲ್ಲಿ ಅಸೋಷಿಯೇಷನ್ ಆ್ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ನಿರೂಪಕಿ ಅಪರ್ಣಾ ಅವರಿಗೆ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ನಿರೂಪಣೆಗೆ ಹೊಸ ಮೆರುಗು ತಂದುಕೊಟ್ಟಿದ್ದ ಅಪರ್ಣಾ ಇನ್ನು ನೆನಪು ಮಾತ್ರ. ನಾಡಿನ ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದ, ನಟಿ ಮತ್ತು ನಿರೂಪಕಿ ಅಪರ್ಣಾ ಅವರ ನಿಧನ ತುಂಬಲಾರದ ನಷ್ಟವಾಗಿದೆ. ಕನ್ನಡ ಭಾಷೆಯನ್ನು ಅತ್ಯಂತ ಸ್ಫುಟವಾಗಿ ಮಾತನಾಡುತ್ತಿದ್ದ ಅಪರ್ಣಾ ಅವರ ನಿರೂಪಣೆಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಎಂದು ನುಡಿದರು.

ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು 58 ವರ್ಷ ವಯಸ್ಸಿನಲ್ಲೆ ಅಗಲಿರುವುದು ನೋವು ತರುತ್ತಿದೆ. ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣಾ ಅವರು, ಕನ್ನಡ ಕುಲಕೋಟಿಗೆ ಹತ್ತಿರವಾಗಿದ್ದು ತಮ್ಮ ಸುಮಧುರ ಮಾತುಗಳಿಂದ ಮನೆ ಮಾತಾಗಿದ್ದರು. 2003ರಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ’ಮೂಡಲ ಮನೆ’ಯಲ್ಲಿ ಅಪರ್ಣಾ ಬಣ್ಣ ಹಚ್ಚಿದ್ದರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ಮಸಣದ ಹೂವು’ ಸಿನಿಮಾದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದರು. ಆನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಇನ್‌ಸ್ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಚಿತ್ರದಿಂದ ಸಂಪೂರ್ಣವಾಗಿ ದೂರ ಉಳಿದಿದರು ಎಂದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಅಪರ್ಣಾ ಸಾಕಷ್ಟು ಬಾರಿ ಮಂಡ್ಯಕ್ಕೂ ಬಂದು ನಿರೂಪಣೆ ಮಾಡಿದ್ದರು. ರಾಜ್ಯ ಸರ್ಕಾರದ ಪ್ರಾಯೋಜಿತ ಪ್ರಮುಖ ಕಾರ್ಯಕ್ರಮಗಳನ್ನು ಬಹುಪಾಲು ಅವರೇ ನಿರೂಪಿಸುತ್ತಿದ್ದರು. ಶಂಕರ್ ಪ್ರಕಾಶ್-ಅಪರ್ಣಾ ನಿರೂಪಕ ಜೋಡಿ ಕಂಠಸಿರಿ ಕನ್ನಡಿಗರ ಮನಗೆದ್ದಿತ್ತು. ಇಂಗ್ಲೀಷ್ ಪದಗಳನ್ನು ಬಳಸದೆ ಅಪ್ಪಟ ಕನ್ನಡದಲ್ಲೆ ಕಾರ್ಯಕ್ರಮ ನಿರೂಪಿಸುತ್ತಿದ್ದುದು ಅಪರ್ಣಾ ಅವರ ವಿಶೇಷವಾಗಿತ್ತು. ಈ ಕಾರಣಕ್ಕಾಗಿಯೇ ಅವರು ಕನ್ನಡಿಗರ ಮನಗೆದ್ದಿದ್ದರು ಎಂದು ಹೇಳಿದರು.

ಹಿರಿಯ ಸಾಹಿತಿ ಲಿಂಗಣ್ಣ ಬಂದೂಕರ್, ಸಾಹಿತಿ ರಾಮಣ್ಣ, ಮುಖಂಡರಾದ ಮಂಜುಳಾ, ಲೋಕೇಶ್, ರಾಜೇಶ್, ಅಪ್ಪಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net