ವಿರಾಜಪೇಟೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಸಂತಾಪ ಸೂಚಿಸಿದ್ದಾರೆ.
ಅತ್ಯಂತ ಮಹತ್ವದ ವ್ಯಕ್ತಿತ್ವ ಉಳ್ಳವರಾಗಿದ್ದವರನ್ನು ದೇಶವು ಇಂದು ಕಳೆದುಕೊಂಡಿದೆ. ಭಾರತ ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವುದಕ್ಕೆ ಡಾ.ಮನಮೋಹನ್ ಸಿಂಗ್ ಅವರ ದೂರದೃಷ್ಟಿಯೇ ಕಾರಣವಾಗಿದೆ. ಅವರು ಭಾರತದ ಆರ್ಥಿಕ ಸುಧಾರಣೆಯ ಹರಿಕಾರರೆಂದು ಖ್ಯಾತಿ ಪಡೆದಿದ್ದರು. ವಿಶ್ವನಾಯಕ ಹಾಗೂ ಸಾಮಾಜಿಕ ನ್ಯಾಯ ಯೋಜನೆಗಳ ರೂವಾರಿ. ಡಾ.ಮನಮೋಹನ್ ಸಿಂಗ್ ಅವರು ಆರ್‌ಟಿಐ, ಆರ್‌ಟಿಇ, ದೇಶದ ವಿವಿಧೆಡೆ 8 ಐಐಟಿಗಳ ಸ್ಥಾಪನೆ, ರೈತರ ಸಾಲ ಮನ್ನಾ ಇಂಡೋ-ಯು.ಎಸ್-ನ್ಯೂಕ್ಲಿಯರ್ ಡೀಲ್, ಕೈಗಾರಿಕಾ ಸ್ನೇಹಿ, ಕೃಷಿ ನೀತಿ, ಆಧಾರ್ ಕಾರ್ಡ್, ನರೇಗಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದವರು. ಇಂದು ನಾವು ಒಬ್ಬ ಆರ್ಥಿಕ ವಿಶ್ವಮಾನವನನ್ನು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.