

ಮಂಡ್ಯ: ಒಕ್ಕಲಿಗ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದ ನಾಗಣ್ಣ ಬಾಣಸವಾಡಿ ಅವರ ನಿಧನ ನೋವುಂಟು ಮಾಡಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿಷಾದಿಸಿದರು.
ನಗರದ ರೈತ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಒಕ್ಕಲಿಗರ ಸೇವಾ ಟ್ರಸ್ಟ್ ಹಾಗೂ ನಾಗಣ್ಣ ಬಾಣಸವಾಡಿ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ನಾಗಣ್ಣ ಬಾಣಸವಾಡಿ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ನಾಗಣ್ಣ ಅವರು ಸಮುದಾಯ ಕಟ್ಟುವಲ್ಲಿ ಶ್ರಮಿಸಿದ್ದರು. ಕೆಂಪೇಗೌಡ ಜಯಂತಿಗೆ ಹೋರಾಟ ಮಾಡಿದ್ದರು. ಕೆಂಪೇಗೌಡ ಅಧ್ಯಯನ ಸಂಸ್ಥೆ ಆಗಬೇಕು ಎಂಬುದು ಅವರ ಹೋರಾಟದ ಭಾಗವಾಗಿತ್ತು. ಇವರ ಹೆಸರಿನಲ್ಲಿ ದತ್ತು ನಿಧಿ ಸ್ಥಾಪಿಸಿ ಪ್ರಶಸ್ತಿ ನೀಡಲು ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ ಮಾತನಾಡಿ, ಹಣ ಹಾಗೂ ಅಧಿಕಾರಕ್ಕಾಗಿ ಆಸೆ ಪಡದೆ ಹಲವು ವೈಯಕ್ತಿಕ ಸಮಸ್ಯೆಗಳ ನಡುವೆಯೂ ಒಕ್ಕಲಿಗ ಸಮಾಜಕ್ಕಾಗಿ ದುಡಿದ ಅಪರೂಪದ ವ್ಯಕ್ತಿ ನಾಗಣ್ಣ. ಒಬ್ಬ ವ್ಯಕ್ತಿ ಜೀವಿಸಿದ್ದಾಗ ಆತನಿಗೆ ಸಹಾಯ ಮಾಡುವವರು ವಿರಳ. ಆದರೆ, ಆತನ ಕಾಲಾನಂತರ ಸ್ಮರಣೆ ಮಾಡುತ್ತೇವೆಯಷ್ಟೆ. ಸಮಾಜಕ್ಕಾಗಿ ದುಡಿದ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ನೋವಿನ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಉದ್ದೇಶದಿಂದಲೇ ನಾಗಣ್ಣ ಅವರು ಬಂದರು. ಅದಕ್ಕಾಗಿ ಹಲವು ಸಂಘಗಳನ್ನು ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದರು. ಜತೆಗೆ ಒಕ್ಕಲಿಗ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಸಮುದಾಯದ ಸರ್ಕಾರಿ ನೌಕರರ ಪರವಾಗಿಯೂ ನಿಂತಿದ್ದ ವ್ಯಕ್ತಿ ನಾಗಣ್ಣ ಅವರು ಎಂದು ಬಣ್ಣಿಸಿದರು.
ಸಭೆಯಲ್ಲಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನನಾಥ ಸ್ವಾಮೀಜಿ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ನ.ಲಿ.ಕೃಷ್ಣ, ರಾಮಾನುಜಪ್ಪ ಕೋಲಾರ, ಅನುಸೂಯ, ಸುಜಾತಾ ಕೃಷ್ಣ, ಬಸರಾಳು ಕೃಷ್ಣೇಗೌಡ, ಯತೀಶ್‌ಬಾಬು, ಎಲ್.ಕೃಷ್ಣ, ಚಿದಂಬರ್ ಭಾಗವಹಿಸಿದ್ದರು.