

ತುಮಕೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಸಿ.ಚನ್ನಿಗಪ್ಪ (76) ಬೆಂಗಳೂರಿನ ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 8:20ರಲ್ಲಿ ನಿಧನರಾದರು.
2018 ಸೆ.17ರಂದು ಕೆಮ್ಮು, ಕಫಕ್ಕೆ ಚಿಕಿತ್ಸೆ ಪಡೆಯುಲು ದಾಖಲಾಗಿದ್ದ ಅವರು, ಆಸ್ಪತ್ರೆ ಶೌಚಗೃಹದಲ್ಲಿ ಕುಸಿದುಬಿದ್ದು, ಮಿದುಳು ನಿಷ್ಕ್ರಿಯಗೊಂಡು ಅರೆಪ್ರಜ್ಞಾವಸ್ಥೆಗೆ ಜಾರಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತಾದರೂ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿಗೆ ಕರೆತರಲಾಗಿತ್ತು. ಅಂದಿನಿಂದ ಕೋಮಾದಲ್ಲೇ ಇದ್ದ ಅವರಿಗೆ ಸಾಗರ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿತ್ತು.
ಚನ್ನಿಗಪ್ಪ ಅವರಿಗೆ ಪತ್ನಿ ಸಿದ್ದಗಂಗಮ್ಮ, ಮೂವರು ಪುತ್ರರು ಹಾಗೂ ಪುತ್ರಿ ಡಿ.ಸಿ.ನಾಗರತ್ನಮ್ಮ ಇದ್ದಾರೆ. ಅವರ ಮೊದಲನೇ ಪುತ್ರ ಡಿ.ಸಿ.ಅರುಣ್‌ಕುಮಾರ್. ಎರಡನೇ ಪುತ್ರ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಹಾಗೂ ಮೂರನೆಯವರು ಜಿಪಂ ಮಾಜಿ ಸದಸ್ಯ ಡಿ.ಸಿ.ವೇಣುಗೋಪಾಲ್.
ದರ್ಶನ ಪಡೆದ ಸಿದ್ದಲಿಂಗಶ್ರೀ: ಚನ್ನಿಗಪ್ಪ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಅಂತಿಮ ದರ್ಶನ ಪಡೆದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, ಮಾಜಿ ಸಚಿವ ಜಮೀರ್ ಅಹ್ಮದ್, ಚಲುವರಾಯಸ್ವಾಮಿ, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಎಂ.ಟಿ.ಕೃಷ್ಣಪ್ಪ ಸೇರಿ ಜನಪ್ರತಿನಿಧಿಗಳು, ಗಣ್ಯರು ಅಂತಿಮ ದರ್ಶನ ಪಡೆದರು.
ಶಿಕ್ಷಕರಾಗಿದ್ದರು: ಬೈರನಾಯಕನಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ಚನ್ನಿಗಪ್ಪ ಸ್ವಗ್ರ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪುರಷನಹಳ್ಳಿಯ ಸಿದ್ಧಗಂಗಾ ಗ್ರಾಮಾಂತರ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. 1971ರಲ್ಲಿ ತುಮಕೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ 1972 ರಿಂದ 76 ರವರೆಗೆ ಶಿಕ್ಷಕರಾಗಿದ್ದರು.
ಅಂತ್ಯಕ್ರಿಯೆ: ಚನ್ನಿಗಪ್ಪ ಅಂತ್ಯಕ್ರಿಯೆ ಸ್ವಗ್ರಾಮ ಬೈರನಾಯಕನಹಳ್ಳಿಯಲ್ಲಿ ಶನಿವಾರ ಅವರ ತಂದೆ-ತಾಯಿಯ ಸಮಾಧಿ ಮುಂಭಾಗ ನಡೆಯಲಿದೆ.
ಪೇದೆಯಿಂದ ರಾಜಕಾರಣದವರೆಗೆ: ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಕ್ಷೇತ್ರದಲ್ಲಿ ಹಂತಹಂತವಾಗಿ ಬೆಳೆದು ಸಂಪುಟ ದರ್ಜೆ ಸಚಿವ ಸ್ಥಾನ ಅಲಂಕರಿಸಿದ್ದ ಸಿ.ಚನ್ನಿಗಪ್ಪ ಅವರದು ವರ್ಣರಂಜಿತ ರಾಜಕೀಯ ಜೀವನ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿ ದೊಡ್ಡಹುಚ್ಚಯ್ಯಪಾಳ್ಯದವರಾದ ಅವರ ರಾಜಕೀಯ ಕಾರ್ಯಕ್ಷೇತ್ರ ತುಮಕೂರು ಜಿಲ್ಲೆ. ಕಲ್ಪತರು ನಾಡಿನ ಜನರ ಜತೆ 3 ದಶಕಗಳಿಂದ ರಾಜಕೀಯ ನಂಟು ಬೆಸೆದುಕೊಂಡಿತ್ತು. ಬೈರನಾಯಕನಹಳ್ಳಿಯ ಚನ್ನರಾಯಪ್ಪ, ಚಿನ್ನಮ್ಮ ದಂಪತಿ ಪುತ್ರ ಸಿ.ಚನ್ನಿಗಪ್ಪ ಅವರು 1994ರಲ್ಲಿ ರಾಜಕೀಯ ಪ್ರವೇಶಿಸಿದರು. 1994 ರಿಂದ 2004ರವರೆಗೆ ಸತತ 3 ಬಾರಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಅವರು, 2004ರಲ್ಲಿ ಎನ್.ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಅಬಕಾರಿ, ರೇಷ್ಮೆ ಖಾತೆಯನ್ನೂ ನಿರ್ವಹಿಸಿದ್ದರು. ನಂತರ 2006ರ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಜೆಡಿಎಸ್-ಬಿಜೆಪಿ 20:20 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ, ಪರಿಸರ ಖಾತೆ ಸಚಿವರಾಗಿದ್ದರು. ಈ ಅವಧಿಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿಯೂ ಆಗಿದ್ದರು.
ಶಿಕ್ಷಣ ಕ್ಷೇತ್ರದಲ್ಲೂ ಹೆಸರು: 1976ರಲ್ಲಿ ಪೊಲೀಸ್ ಇಲಾಖೆ ಸೇರಿದ ಚನ್ನಿಗಪ್ಪ 1987ರವರೆಗೆ ವಿವಿಧ ಠಾಣೆಗಳಲ್ಲಿ ಪೇದೆಯಾಗಿದ್ದರು. 1983-84ರಲ್ಲಿ ಬಿಇಡಿ ಕೋರ್ಸ್ ಮುಗಿಸಿದ್ದರು. ಪೊಲೀಸ್ ಇಲಾಖೆಗೆ ಗುಡ್‌ಬೈ ಹೇಳಿ 1989ರಲ್ಲಿ ಸ್ನೇಹಿತರೊಂದಿಗೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟ ಅವರು, 1989ರಲ್ಲಿ ಯಶವಂತಪುರ ಎಪಿಎಂಸಿಯಲ್ಲಿ ತರಕಾರಿ ಮಂಡಿ ‘ಮಾರುತಿ ಟ್ರೇಡರ್ಸ್’ ಆರಂಭಿಸಿ ದೊಡ್ಡ ಹೆಸರು ಮಾಡಿದರು. 1989ರಿಂದ 1994ರಲ್ಲಿ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಭೂಮಿ ಮೇಲೆ ಹೂಡಿ ದುಪ್ಪಟ್ಟು ಲಾಭಗಳಿಸಿದರು. ಈ ವೇಳೆ 1990ರಲ್ಲಿ ಮಾರುತಿ ಕೈಗಾರಿಕಾ ನಗರವನ್ನು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿದರು. ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. 1990ರಲ್ಲಿ ಯಲಹಂಕದಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆ ಆರಂಭಿಸಿ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟರು. 2008ರಲ್ಲಿ ಬೈರನಾಯಕನಹಳ್ಳಿಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಿದ ಚನ್ನಿಗಪ್ಪ ಇಂಜಿನಿಯರಿಂಗ್, ಡಿಪ್ಲೊಮಾ ಕೋರ್ಸ್ ಗಳನ್ನು ಆರಂಭಿಸಿದರು.
1994ರಲ್ಲಿ ರಾಜಕೀಯಕ್ಕೆ ಪದಾರ್ಪಣೆ: 1994ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಚನ್ನಿಗಪ್ಪ ಮೊದಲ ಪ್ರಯತ್ನದಲ್ಲೇ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿದ್ದು ರಾಜಕೀಯ ಇತಿಹಾಸ. ಅಲ್ಲಿಂದ ಆರಂಭವಾದ ರಾಜಕೀಯ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡರು.
1994ರಿಂದ 2008ರವರೆಗೆ ಸತತ 3 ಅವಧಿಗೆ ಕೊರಟಗೆರೆಯಿಂದ ಶಾಸಕರಾಗಿ ಆಯ್ಕೆಯಾದ ಚನ್ನಿಗಪ್ಪ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ವಲಸೆ ಹೋದರು. ಈ ವೇಳೆ ಆಪರೇಷನ್ ಕಮಲಕ್ಕೆ ತುತ್ತಾಗಿ 2008ರಲ್ಲಿ ಬಿಜೆಪಿ ಸೇರಿದ್ದರು. ಮಧುಗಿರಿಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಪುತ್ರ ಡಿ.ಸಿ.ಗೌರಿಶಂಕರ್ ಅವರನ್ನು ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚನ್ನಿಗಪ್ಪ ಸೋಲುಂಡಿದ್ದರು. ಇದು ಅವರ ರಾಜಕೀಯ ಏಳು-ಬೀಳುಗಳಲ್ಲೊಂದು. ಕೆಲ ವರ್ಷ ದೇವೇಗೌಡರ ಕುಟುಂಬದ ಜತೆ ವೈರತ್ವ ಕಟ್ಟಿಕೊಂಡಿದ್ದ ಚನ್ನಿಗಪ್ಪ ಮತ್ತೆ ತವರು ಮನೆಗೆ ಹಿಂದಿರುಗಿ ಜೆಡಿಎಸ್ ಸೇರ್ಪಡೆಯಾದರು.
ಪುಟಿದೆದ್ದಿದ್ದ ಚನ್ನಿಗಪ್ಪ: 2015 ಡಿಸೆಂಬರ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಮೂತ್ರಪಿಂಡ ವೈಫಲ್ಯಕ್ಕೊಳಗಾದ ಬಳಿಕ ರಾಜಕಾರಣದಿಂದ ದೂರ ಸರಿದರು. ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡ ನಂತರವಂತೂ ಸಕ್ರಿಯ ರಾಜಕೀಯದಿಂದ ದೂರವೇ ಆದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಮತ್ತೆ ಪುಟಿದೆದ್ದ ಚನ್ನಿಗಪ್ಪ ಅವರು, 2017ರ ಜನವರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡರು. ಜಿಲ್ಲೆಯಲ್ಲಿ ಪಕ್ಷದ ಕಚೇರಿಗೆ ಹೊಸ ರೂಪಕೊಟ್ಟರು. ವೈಯಕ್ತಿಕ ವರ್ಚಸ್ಸಿನಿಂದ ಪಕ್ಷ ಸಂಘಟಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಗೌರಿಶಂಕರ್ ಅವರನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ಅಷ್ಟರಲ್ಲಿ ಮತ್ತೆ ಆರೋಗ್ಯ ಕೈಕೊಟ್ಟಿತು. ಮಿದುಳು ನಿಷ್ಕ್ರಿಯಗೊಂಡ ಬಳಿಕ ಚನ್ನಿಗಪ್ಪ ಚೇತರಿಸಿಕೊಳ್ಳಲೇ ಇಲ್ಲ.
ಶಿವಕುಮಾರ ಶ್ರೀಗಳೆಂದರೆ ಎಲ್ಲಿಲ್ಲದ ಗೌರವ: 3 ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದ ಚನ್ನಿಗಪ್ಪ ಅವರದ್ದು ವಿಶೇಷ ಮ್ಯಾನರಿಸಂ. ಜೈ ಮಾರುತಿ, ಜೈ ಆಂಜನೇಯ... ಅವರ ಬಾಯಲ್ಲಿ ಸಲೀಸಾಗಿ ಬರುತ್ತಿದ್ದ ಮಾತುಗಳು. ಇನ್ನು ಸಿದ್ಧಗಂಗಾ ಶ್ರೀಗಳು ಅಂದರೆ ಎಲ್ಲಿಲ್ಲದ ಗೌರವ, ಭಕ್ತಿ. ಶ್ರೀಮಠದ ದಾಸೋಹಕ್ಕೆ ಜೀವನದುದ್ದುಕ್ಕೂ ಕೈಲಾದ ನೆರವು ಕೊಡುತ್ತಾ ಬಂದಿದ್ದರು.
ಕುಟುಂಬ ಸದಸ್ಯರಂತಿದ್ದ ಚೆನ್ನಿಗಪ್ಪ ಸಾವು ದುಃಖ ತಂದಿದೆ. ದೇವೇಗೌಡರ ಒಡನಾಡಿಯಾಗಿ, ನನಗೆ ಹಿರಿಯರಾಗಿ ಮಾರ್ಗದರ್ಶನ ಮಾಡಿದ್ದಾರೆ. ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಿವ ಮತ್ತು ಆಂಜನೇಯ ಭಕ್ತರಾಗಿದ್ದ ಚನ್ನಿಗಪ್ಪ ಅವರನ್ನು ಶಿವರಾತ್ರಿಯಂದೇ ದೇವರು ಕರೆಸಿಕೊಂಡಿದ್ದಾನೆ. ಶನಿವಾರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತೇನೆ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಮಾಜಿ ಸಚಿವ ಚನ್ನಿಗಪ್ಪ ಮೃದು ಹೃದಯದವರಾಗಿದ್ದರು. ಮಾತು ಮಾತ್ರ ಕಠಿಣ. ನಾನು ಮತ್ತು ಅವರು ಬಹಳ ಸ್ನೇಹದಿಂದ ಇದ್ದೆವು. ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನೇಕ ಬಡ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದಾರೆ, ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ.
ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ
ದೀರ್ಘ ಕಾಲದಿಂದ ಅರೋಗ್ಯದಿಂದ ಬಳಲುತ್ತಿದ್ದ ಚನ್ನಿಗಪ್ಪ ಅವರು ಶಿವರಾತ್ರಿಯಂದು ಶಿವನ ಸಾನ್ನಿಧ್ಯ ಸೇರಿದ್ದಾರೆ. ರಾಜಕಾರಣಿಯಾಗಿ ಎಷ್ಟು ಚಿರಪರಿಚಿತವೊ ಹಾಗೆಯೆ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ಭಗವಂತ ನೀಡಲಿ.
ಸಿದ್ದಲಿಂಗ ಸ್ವಾಮೀಜಿ ಮಠಾಧ್ಯಕ್ಷ, ಸಿದ್ದಗಂಗಾಮಠ