ಎಲ್ಲರನ್ನೂ ತನ್ನವರೆಂದ ಧೀರಸನ್ಯಾಸಿ ಪೇಜಾವರಶ್ರೀ: ಸ್ವಾಮಿ ಜಪಾನಂದ ಜೀ

11TMk_Vishweshateerta_Swamaji 1
Published on

ತುಮಕೂರು: ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು ವ್ಯಾಸರಾಜರು, ವಾಧಿರಾಜರು ಮತ್ತು ಗುರುರಾಘವೇಂದ್ರ ಸ್ವಾಮಿಗಳ ಸಾಕಾರ ರೂಪವಾಗಿದ್ದವರು ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಸ್ಮರಿಸಿದರು.

ನಗರದಲ್ಲಿ ಅಖಿಲ ಭಾರತ ಮಾಧ್ವ ಮಂಡಲಿ ಜಿಲ್ಲಾ ಘಟಕ ಮತ್ತು ಕೃಷ್ಣಮಂದಿರದಿಂದ ಶನಿವಾರ ಹಮ್ಮಿಕೊಂಡಿದ್ದ ಗುರುನಮನ ಮತ್ತು ಮಹಾಸಮಾರಾಧನೆಯಲ್ಲಿ ಪೇಜಾವರ ಶ್ರೀಗಳಿಗೆ ನುಡಿನಮನ ಅರ್ಪಿಸಿದರು.

ಶ್ರೀಗಳು ಇಂದು ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಅವರ ಸತ್ಕಾರ್ಯಗಳು ನಮ್ಮ ಮುಂದಿವೆ, ಜಾತಿ, ಮತ, ಪಂಥಗಳಿಂದ ಹೊರಬಂದು ಎಲ್ಲರನ್ನು ತನ್ನವರೆಂದು ಅಪ್ಪಿಕೊಂಡ ಧೀರಸನ್ಯಾಸಿ ಎಂದು ಬಣ್ಣಿಸಿದರು.

ಪೇಜಾವರರ ಶ್ರೀಗಳು ಸಮಾಜಮುಖಿಯಾಗಿದ್ದವರು. ಎಲ್ಲರಿಗೂ ಮಾರ್ಗದರ್ಶಕರಾಗಿ ಸರಿ ದಾರಿಯಲ್ಲಿ ನಡೆಸಿದವರು, ಅವರು ನಡೆದ ದಾರಿ ನಮಗೆ ಮಾರ್ಗದರ್ಶಕವಾಗಿರಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ನಮನ ಸಲ್ಲಿಸಿದರು.

ತುಮಕೂರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಬ್ರಾಹ್ಮಣ ಸಮಾಜದ ಎಂ.ಕೆ. ನಾಗರಾಜರಾವ್, ಬೇಲೂರುಸ್ವಾಮಿ ನುಡಿ ನಮನ ಸಲ್ಲಿಸಿದರು. ಸಂಘಟಕ ಜಿ.ಕೆ.ಶ್ರೀನಿವಾಸ್, ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಕಾರ್ಯದರ್ಶಿ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net