ರವಿಕುಮಾರ್ ಕನಸನ್ನು ನನಸಾಗಿಸೋಣ: ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿಕೆ

condolence meeting mandya
Published on

ಮಂಡ್ಯ: ರವಿಕುಮಾರ್ ಅದ್ಭುತ ಸಂಘಟಕ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು. ಹಾವೇರಿ ಸಮ್ಮೇಳನಕ್ಕಿಂತಲೂ ಅದ್ದೂರಿ ಕಾರ್ಯಕ್ರಮ ಹಾಗೂ ಬೃಹತ್ ಕನ್ನಡ ಭವನವನ್ನು ಕಟ್ಟಬೇಕು ಎಂಬ ಎರಡು ಕನಸು ಹೊಂದಿದ್ದರು. ಅದನ್ನು ಪ್ರಾಮಾಣಿಕವಾಗಿ ಮಾಡಿದಾಗ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅಭಿಪ್ರಾಯಪಟ್ಟರು.

ನಗರದ ರೈತ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘಟನೆಗಳು ಮತ್ತು ನಾಗರಿಕರ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಅವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತಾನೊಂದು ಬಗೆದರೆ ದೈವವೊಂದು ಬಗೆಯಿತು’ ಎಂಬಂತೆ ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವರ ಅಪೇಕ್ಷೆಯಂತೆ ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು. ಬೃಹತ್ ಕನ್ನಡ ಭವನ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೈತ್ಯ ಸಾಹಿತ್ಯ ಸಂಘಟಕನಾಗಿದ್ದ ರವಿಕುಮಾರ ಅವರ ಹೆಸರಿನಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಬೇಕು. ಅದರಿಂದ ಉಳಿದವರಿಗೆ ಪ್ರೇರಣೆ ಸಿಗುತ್ತದೆ. ರವಿಕುಮಾರ್ ಅವರು ಕಸಾಪ ಅಧ್ಯಕ್ಷರಾಗಿ, ಸಂಘಟಕನಾಗಿ, ಭಾಷಾ ಪ್ರೇಮಿಯಾಗಿ ಏನೇನು ಕೆಲಸ ಮಾಡಿದ್ದಾರೆ. ಅವರ ಸಾಧನೆ ಬಗ್ಗೆ ಗ್ರಂಥವೊಂದನ್ನು ಹೊರತಂದು ಸಮ್ಮೇಳನದ ಮೊದಲ ದಿನವೇ ಬಿಡುಗಡೆ ಮಾಡಬೇಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಶೀಘ್ರವೇ ಕ್ರಿಯಾಶೀಲ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕು ಎಂಬ ಸಲಹೆಗಳನ್ನು ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಅಪರೂಪದ ವ್ಯಕ್ತಿತ್ವದ ರವಿಕುಮಾರ್ ಅವರದು ಸಾಯುವ ವಯಸ್ಸಲ್ಲ. ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಕ್ಷೇತ್ರಕ್ಕೆ ಅವರ ಅಗತ್ಯತೆ ಇತ್ತು. ಪೂರ್ಣವಾಗಿ ತಮ್ಮನ್ನು ಸಂಘಟನೆಗೆ ತೊಡಗಿಸಿಕೊಂಡು, ಕೊಟ್ಟ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸುವ ಶಕ್ತಿಯಿತ್ತು. ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರಿಗೂ ಮುಟ್ಟಿಸುವಲ್ಲಿ ಸಾಫಲ್ಯ ಕಂಡ ಅಪರೂಪದ ವ್ಯಕ್ತಿ. ಜನಸಾಮಾನ್ಯರು, ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕರು ಎಲ್ಲರನ್ನು ಸಾಹಿತ್ಯ ಪರಿಷತ್‌ನೊಟ್ಟಿಗೆ ನಿಲ್ಲುವಂತೆ ಮಾಡಿದ ಕೀರ್ತಿ ಸಲ್ಲುತ್ತದೆ. ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಅಪರೂಪ ಮತ್ತು ಸವಾಲಿನ ಕೆಲಸ. ಅದನ್ನು ದಾಟಿ ಎಂಟು ವರ್ಷ ಕಾಲ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಅವರ ಎರಡು ಕನಸುಗಳು ಈಡೇರಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ತೈಲೂರು ವೆಂಕಟಕೃಷ್ಣ ಮಾತನಾಡಿ, ‘ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನವೆಂಬ’ ವಿವೇಕಾನಂದರ ವಾಣಿಯಂತೆ ರವಿಕುಮಾರ್ ಸಾವಿನಲ್ಲೂ ಒಂದು ಗೌರವವಿದೆ ಎಂದು ತೋರಿಸಿದ್ದಾರೆ. ಹಿಡಿದ ಕೆಲಸ ಸಾಧಿಸಬೇಕೆಂಬ ಛಲ, ಅಪರೂಪದ ಗುಣ ಇತ್ತು. ಯಾರೂ ಊಹಿಸದ ವಿಸ್ಮಯದ ಹಾದಿಯಲ್ಲಿ ನಡೆದು ಹೋಗಿದ್ದಾರೆ ಎಂದು ವಿಷಾದಿಸಿದರು.

ಸಭೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಮೀರಾ ಶಿವಲಿಂಗಯ್ಯ, ಜಿ.ಟಿ.ವೀರಪ್ಪ ಮಾತನಾಡಿದರು.

ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಗೌಡ, ರವಿಕುಮಾರ್ ಅವರ ಪತ್ನಿ ಚಂದ್ರಕಲಾ ಇತರರಿದ್ದರು.

ಸಮಾರಂಭಕ್ಕೂ ಮೊದಲು ಗೊರವಾಲೆ ಚಂದ್ರಶೇಖರ್, ಹುರುಗಲವಾಡಿ ರಾಮಯ್ಯ, ಮಂಜುಳಾ ಮುಂತಾದವರು ಗೀತ ಗಾಯನದ ಮೂಲಕ ನಮನ ಸಲ್ಲಿಸಿದರು. ಸಭೆಯಲ್ಲಿ ರವಿ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net