

ಮಂಡ್ಯ: ಜಿಲ್ಲೆಯ ಪರಿಶಿಷ್ಟ ಸಮುದಾಯದ ರಾಜಕೀಯ ಮುಖಂಡರು ಹಲವು ವರ್ಷ ದುಡಿದರೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಉನ್ನತ ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ಹಿರಿಯ ದಲಿತ ಮುಖಂಡ ಗುರುಪ್ರಸಾದ್ ಕೆರಗೋಡು ವಿಷಾದಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಸದಸ್ಯ ಎಂ.ಡಿ.ಜಯರಾಂ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟರಿಗೆ ಅಧಿಕಾರ ಸಿಕ್ಕಿದೆ. ಆದರೆ ವಿಧಾನಪರಿಷತ್, ನಿಗಮ ಮಂಡಳಿಗಳಲ್ಲಿ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮೂಹ ಸಾಂಪ್ರದಾಯಿಕ ಮತನೀಡುತ್ತಾ ಬಂದಿದ್ದಾರೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈಗಲಾದರೂ ಉನ್ನತ ಸ್ಥಾನಮಾನ ಪಡೆಯಲು ಮುಂದಾಗಬೇಕು. ಎಂ.ಡಿ.ಜಯರಾಂ ಸೇರಿದಂತೆ ಹಲವು ಮುಖಂಡರು ಸುದೀರ್ಘಕಾಲ ರಾಜಕಾರಣ ಮಾಡಿದರೂ ಸ್ಥಳೀಯ ಅಧಿಕಾರಕ್ಕೆ ಸೀಮಿತರಾದರು ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಹಿಂದೆ ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡುತ್ತಿದ್ದೆವು. ನಂತರ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೆವು. ಎದುರಾಳಿಗಳು ಸಹ ನಮ್ಮಲ್ಲಿ ಬಂದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ವೈರತ್ವದ ರಾಜಕಾರಣ ಇರಲಿಲ್ಲ. ಅಧಿಕಾರದ ಯೋಗ ನೀಡಿದ ಮತದಾರನ ಕೆಲಸ ಮಾಡಿಕೊಡುವುದು ಚುನಾಯಿತ ಜನಪ್ರತಿನಿಧಿಯ ಕರ್ತವ್ಯ, ಜವಾಬ್ದಾರಿ. ರಾಜಕಾರಣಿಯಾಗಿ ಎಂ.ಡಿ.ಜಯರಾಂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು. ಎಲ್ಲ ಸಮುದಾಯದವರ ಜತೆ ಒಡನಾಟವಿಟ್ಟುಕೊಂಡು ಮುನ್ನಡೆದಿದ್ದರು. ಸ್ನೇಹಮಯ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮಾಜಿ ಸದಸ್ಯೆ ಇಂದಿರಾ ಸತೀಶ್ ಬಾಬು, ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್, ನಗರದ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಸಭೆ ಸದಸ್ಯ ಶ್ರೀಧರ್, ಸುಂಡಳ್ಳಿ ಮಂಜುನಾಥ್ ಇತರರಿದ್ದರು.