

ಬೆಂಗಳೂರು: ಸರ್ಕಾರಿ ಕಾಮಗಾರಿಗಳಲ್ಲಿ ಗುತ್ತಿಗೆ ಹಿಡಿಯಲು ಹರಸಾಹಸ ಪಡುತ್ತಿದ್ದ ಎಸ್ಸಿಎಸ್ಟಿ ಗುತ್ತಿಗೆ ದಾರರಿಗೆ ಸರ್ಕಾರ ಸಣ್ಣದೊಂದು ವಿನಾಯಿತಿ ನೀಡಿದೆ.
ಟೆಂಡರ್‌ನಲ್ಲಿ ಭಾಗವಹಿಸಲು, ಸಂಬಂಧ ಪಟ್ಟ ಕಾಮಗಾರಿಯ ಶೇ.80 ಪ್ರಮಾಣ ಕಾಮಗಾರಿ ನಿರ್ವಹಿಸಬೇಕಾದ ಷರತ್ತು ಹಾಕಲಾಗಿತ್ತು. ಹೀಗಾಗಿ ಮೀಸಲಾತಿ ಇದ್ದರೂ ಈ ಷರತ್ತಿನಿಂದಾಗಿ ಸಣ್ಣಪುಟ್ಟ ಗುತ್ತಿಗೆದಾರರು ಸಾಮರ್ಥ್ಯ ಇಲ್ಲದೇ ವಂಚಿತರಾಗುತ್ತಿದ್ದರು.
ಇದೀಗ ಈ ಷರತ್ತನ್ನು ಶೇ.80ರಿಂದ ಶೆ.50ಕ್ಕೆ ಇಳಿಸಲಾಗಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಎಸ್ಸಿಎಸ್ಟಿ ಗುತ್ತಿಗೆದಾರರು ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಲಿದೆ. ಸಣ್ಣಪುಟ್ಟ ಗುತ್ತಿಗೆದಾರರೂ ಸಹ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ. ಪ್ರಸ್ತುತ ಒಂದು ಕೋಟಿ ರೂ. ವರೆಗಿನ ಕಾಮಗಾರಿ ಎಸ್ಟಿ ಎಸ್ಟಿ ಗುತ್ತಿಗೆದಾರರಿಗೆ ಮೀಸಲಾಗಿದೆ.
ಈ ಷರತ್ತು ಸಡಿಲಿಸಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದ ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘ, ಸರ್ಕಾರದ ಈ ಆದೇಶದ ಬಗ್ಗೆ ಖುಷಿ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಮಹದೇವಸ್ವಾಮಿ ಪ್ರತಿಕ್ರಿಯೆ ನೀಡಿ, ಎಸ್ಸಿಎಸ್ಟಿ ಸಮುದಾಯದ ಸಣ್ಣಪುಟ್ಟ ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ಆದೇಶ ಹೊರಬಿದ್ದಿದೆ. ಹಾಗೆಯೇ ಒಂದು ಕೋಟಿ ರೂ. ವರೆಗಿನ ಗುತ್ತಿಗೆಯಲ್ಲಿನ ಮೀಸಲನ್ನು ಎರಡು ಕೋಟಿ ರೂ.ಗೆ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಶೀಘ್ರವೇ ಅದೂ ಸಹ ಈಡೇರುವ ವಿಶ್ವಾಸವಿದೆ ಎಂದಿದ್ದಾರೆ.