

ಚಿಕ್ಕಮಗಳೂರು: ಎರಡು ಬಾರಿ ಕೋರಂ ಇಲ್ಲದ ಕಾರಣಕ್ಕೆ ಮುಂದೂಡಿಕೆಯಾಗಿ ಬುಧವಾರ ನಡೆದ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕೊನೆಗೂ ಕ್ರಿಯಾಯೋಜನೆಗೆ ಷರತ್ತುಬದ್ಧ ಸರ್ವಾನುಮತದ ಅನುಮೋದನೆ ದೊರೆತು ಅತ್ತ ಅಧ್ಯಕ್ಷರು ಗೆಲ್ಲಲಿಲ್ಲ; ಇತ್ತ ಸದಸ್ಯರು ಸೋಲಲಿಲ್ಲ ಎನ್ನುವ ಹಂತಕ್ಕೆ ಅಧ್ಯಕ್ಷರ ರಾಜೀನಾಮೆ ಪ್ರಹಸನ ಬಂದು ನಿಂತಿದೆ.
ಅಧ್ಯಕ್ಷರ ರಾಜೀನಾಮೆಗೆ ಪಟ್ಟು
ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದರು. ಈ ಸಂದರ್ಭ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಹಾಗೂ ಸ್ವಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ವಾಕ್ಸಮರವೇ ನಡೆದು ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಈ ಹಂತದಲ್ಲಿ ಕೋರಂ ಕೊರತೆ ಕಾರಣಕ್ಕೆ ಅಧ್ಯಕ್ಷರು 15 ನಿಮಿಷ ಸಭೆಯನ್ನು ಮುಂದೂಡಿದರು.
ಅನುದಾನ ಸಮಾನ ಹಂಚಿಕೆ
ಸಭೆಯಿಂದ ಹೊರ ಹೋದ ಬಳಿಕ ಶಾಸಕರಾದ ಬೆಳ್ಳಿಪ್ರಕಾಶ್, ಡಿ.ಎಸ್.ಸುರೇಶ್ ಟಿ.ಡಿ.ರಾಜೇಗೌಡ ಸೇರಿದಂತೆ ಕೆಲವು ಸದಸ್ಯರು ಅಧ್ಯಕ್ಷೆ ಸುಜಾತ ಜತೆ ಚರ್ಚಿಸಿ ಅಧ್ಯಕ್ಷರ ವಿವೇಚನೆಯ ಶೇ.15 ರಷ್ಟು ಶಾಸನಬದ್ಧ ಅನುದಾನವನ್ನು ಎಲ್ಲ ಸದಸ್ಯರ ಕ್ಷೇತ್ರಗಳಿಗೆ ಹಂಚಿಕೆ ಮಾಡಬೇಕು. ಹಾಗಿದ್ದರೆ ಕ್ರಿಯಾಯೋಜನೆಗೆ ಅನುಮೋದನೆ ನೀಡುವುದಾಗಿ ಷರತ್ತು ಹಾಕಿದಾಗ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದ ಬೆಳವಣಿಗೆ ನಡೆದಿತ್ತು.
ಒಕ್ಕೊರಲ ಅನುಮೋದನೆ
ಮತ್ತೆ ಅಧ್ಯಕ್ಷರು, ಶಾಸಕರು, ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲ ಸದಸ್ಯರು ಸಭೆ ಸೇರಿದ ಕೂಡಲೇ ಸದಸ್ಯ ಎಸ್.ಎನ್.ರಾಮಸ್ವಾಮಿ ವಿಷಯ ಪ್ರಸ್ತಾಪಿಸಿ, ಅಧ್ಯಕ್ಷರ ವಿವೇಚನೆಯ ಶೇ.15ರಷ್ಟು ಶಾಸನಬದ್ಧ ಅನುದಾನವನ್ನು ಎಲ್ಲ ಸದಸ್ಯರ ಕ್ಷೇತ್ರವಾರು ಸಮಾನವಾಗಿ ಹಂಚಿಕೆ ಮಾಡಬೇಕು. ಶಾಸನಬದ್ಧ ಅನುದಾನ ನಾವು ಮಾಡಿಕೊಂಡಿರುವ ಒಪ್ಪಂದವೇ ಹೊರತು ಕಾನೂನಿನಲ್ಲಿ ಅವಕಾಶವಿಲ್ಲ. ಈ ಕಾರಣಕ್ಕೆ ಅಧ್ಯಕ್ಷರು ಇದಕ್ಕೆ ಒಪ್ಪಿದರೆ 30:54, 15ನೇ ಹಣಕಾಸು ಮತ್ತು ಸ್ಥಾಯಿ ಸಮಿತಿಯ ಎಲ್ಲ ನಿರ್ಣಯಗಳಿಗೆ ಒಕ್ಕೊರಲ ಅನುಮೋದನೆ ನೀಡುವುದಾಗಿ ತಿಳಿಸಿದರು.