ಸಚಿವ ಖರ್ಗೆ ಬೆಂಬಲಿಗರ ವರ್ತನೆಗೆ ಖಂಡನೆ

New Tenginakayi mahesh New
Published on

ಹುಬ್ಬಳ್ಳಿ : ಕಲಬುರಗಿಯ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಇತ್ತೀಚೆಗೆ ಘೇರಾವ್ ಹಾಕಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರ ಕೃತ್ಯವನ್ನು ಶಾಸಕ ಮಹೇಶ ಟೆಂಗಿನಕಾಯಿ ಖಂಡಿಸಿದ್ದಾರೆ.

ಚಲವಾದಿ ನಾರಾಯಣಸ್ವಾಮಿ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದರು. ಆ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಸುಮಾರು ಒಂದು ತಾಸಿನವರೆಗೆ ಚಲವಾದಿ ನಾರಾಯಣಸ್ವಾಮಿ ಅವರಿಗೆ ಕಾರ್ಯಕ್ರಮಕ್ಕೆ ತೆರಳಲು ಬಿಡದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರ ಕಾರಿನ ಮೇಲೆ ಮೊಟ್ಟೆ ಎಸೆದು, ಶಾಯಿ ಚೆಲ್ಲಿ ವಿಕೃತಿ ಮೆರೆದಿದ್ದಾರೆ ಎಂದು ದೂರಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು. ಸರ್ಕಾರ ತಮ್ಮದೇ ಇದೆಯೆಂದು ಗೂಂಡಾ ವರ್ತನೆ ತೋರಿದ್ದಾರೆ ಎಂದು ಟೆಂಗಿನಕಾಯಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ ಹೊರತು ಶಾಶ್ವತವಾಗಿ ಅಲ್ಲ ಎಂಬುದನ್ನು ಸಚಿವರು ಹಾಗೂ ಅವರ ಬೆಂಬಲಿಗ ಕಾರ್ಯಕರ್ತರು ಅರಿತುಕೊಳ್ಳಲಿ. ಇತಿ್ತೕಚಿನ ದಿನಗಳಲ್ಲಿ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದರೆ ಸಚಿವರ ಮನಸ್ಥಿತಿ ಸ್ಥಿರವಾಗಿಲ್ಲವೆಂದೆನಿಸುತ್ತದೆ. ಅವರ ಹೇಳಿಕೆಗಳು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ ಎಂದು ಟೀಕಿಸಿದ್ದಾರೆ.

ಇನ್ನಾದರೂ ಕಾಂಗ್ರೆಸ್ ಮುಖಂಡರು ಸುಧಾರಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net