ಕಾರ್ಯಾದೇಶ, ಕ್ರಿಯಾ ಯೋಜನೆ ವಾಪಸ್‌ಗೆ ಖಂಡನೆ

13M.D.R.11
Published on

ಮದ್ದೂರು: 2025-26ನೇ ನರೇಗಾ ಕಾಮಗಾರಿಗಳಿಗೆ ಕಾರ್ಯಾದೇಶ ನೀಡದೆ ಹಾಗೂ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಾಪಸ್ ಕಳುಹಿಸಿರುವ ಕ್ರಮ ಖಂಡಿಸಿ ತಾಲೂಕು ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ತಾಪಂ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.

ಪಟ್ಟಣದ ತಾ.ಪಂ. ಕಚೇರಿ ಬಳಿ ತಾಲೂಕು ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಪದಾಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ತಾಲೂಕು ರೈತ ಸಂಘಟನೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿ ಗ್ರಾ.ಪಂ. ಸದಸ್ಯರ ಹಲವು ಬೇಡಿಕೆಗಳನ್ನು ತ್ವರಿತ ಗತಿಯಲ್ಲಿ ಈಡೇರಿಸಬೇಕೆಂದು ಒತ್ತಾಯಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2025-26ನೇ ಸಾಲಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ತಾಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ ರಚಿಸಿ ತಾಲೂಕು ಪಂಚಾಯಿತಿಗೆ ಕಳುಹಿಸಿದ್ದರೂ 42 ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಯ ಮೊತ್ತ 187 ಕೋಟಿ ರೂ. ಆಗಿದೆ.

ತಾ.ಪಂ. ತಂತ್ರಾಂಶದಲ್ಲಿ ಕಳುಹಿಸಿಕೊಟ್ಟಿದ್ದರೂ ತಾಪಂ ಇಒ ಮತ್ತು ಜಿಪಂ ಸಿಇಒ ಯಾವುದೇ ಸರ್ಕಾರದ ಅಧಿಕೃತ ಆದೇಶ ಮತ್ತು ಸುತ್ತೋಲೆಗಳು ಇಲ್ಲದೆ ತಂತ್ರಾಂಶದಲ್ಲಿ ಇರುವಂತಹ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಕಾನೂನು ಬಾಹಿರವಾಗಿ ರದ್ದುಗೊಳಿಸಿ ಮೌಖಿಕವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಗ್ರಾಮ ಪಂಚಾಯಿತಿಗಳಿಗೆ ತಿಳಿಸಿರುವ ಕ್ರಮ ಖಂಡಿಸಿದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿರುವ ಪಿಡಿಒಗಳು ಯಾವುದೇ ವಾರ್ಡ್‌ಸಭೆ, ಗ್ರಾಮಸಭೆ ಮತ್ತು ಪಂಚಾಯಿತಿ ಸಭೆಗಳನ್ನು ಮಾಡದೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿಗಳನ್ನು ರಚನೆ ಮಾಡಿ 187 ಕೋಟಿ ರೂ. ಅನುದಾನವನ್ನು ಕೇವಲ 57 ಕೋಟಿಗೆ ಸೀಮಿತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಮೇಲಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ ಗ್ರಾಪಂ ಸದಸ್ಯರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಆಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ. ಸಂಘಟನೆಯ ತಾಲೂಕು ಅಧ್ಯಕ್ಷ ಸತ್ಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಕೃಷ್ಣ, ಪದಾಧಿಕಾರಿಗಳಾದ ಎಸ್.ದಯಾನಂದ್, ನಳಿನಿ, ಶಿವಲಿಂಗಯ್ಯ, ರಾಮಕೃಷ್ಣ, ಜಗದೀಶ್, ಮಂಜುನಾಥ್, ಪವಿತ್ರಾ, ಸುಧಾ, ಕಮಲಮ್ಮ, ಪುಟ್ಟರಾಮು, ರಾಜೇಶ್, ರೈತ ಸಂಘಟನೆಯ ಮುಖಂಡರಾದ ಲಿಂಗಪ್ಪಾಜಿ, ವರದರಾಜು, ರಾಮಕೃಷ್ಣ, ಕೃಷ್ಣೇಗೌಡ, ಕರೀಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net