

ಚಿತ್ರದುರ್ಗ: ಬಗರ್‌ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಹಲವೆಡೆ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ತಡೆಯುವಂತೆ ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗಯ್ಯನಪಾಳ್ಯ ಗ್ರಾಮದಲ್ಲಿ ಮೂರ‌್ನಾಲ್ಕು ದಶಕಗಳಿಂದ ಕಂದಾಯ ಭೂಮಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಸೇರಿದೆ ಎಂದು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಶಿವರಾಂ ಕಾರಂತ ಬಡಾವಣೆಯಲ್ಲಿರುವ ರೈತರ ಮೇಲೆ ಬಿಡಿಎ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ. 5 ಎಕರೆ ಸಪೋಟ ತೋಟ ನಾಶ ಪಡಿಸಿದ್ದು, ಇದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಇಲ್ಲಿ ಆಸ್ಪತ್ರೆ, ಶಾಲೆ, ರಸ್ತೆ ಸೇರಿ ಇತರೆ ಸಾರ್ವಜನಿಕ ಉಪಯೋಗಕ್ಕೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಶ್ರೀಮಂತರು, ರಾಜಕಾರಣಿಗಳು, ಅಧಿಕಾರಿಗಳಿಗೆ ನಿವೇಶನ ನೀಡಲು ರೈತರ ವಿರುದ್ಧ ದೌರ್ಜನ್ಯದಿಂದ ಭೂಮಿ ಕಸಿದುಕೊಳ್ಳುವ ಪ್ರಯತ್ನ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ನೊಂದ ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಮುಖಂಡರಾದ ಕೆ.ಓಂಕಾರಪ್ಪ, ಟಿ.ಜಗನ್ನಾಥ, ಜಯಣ್ಣ, ರಾಮು, ಮಾರುತಿ, ರಂಗಪ್ಪ, ಕೆ.ಕಲ್ಲೇಶಪ್ಪ, ಎಚ್.ಸದಾಶಿವಪ್ಪ, ಸಿ.ಕೆ.ಸಿದ್ದೇಶ್, ಎಚ್.ಬಸವರಾಜಪ್ಪ, ಎಂ.ಸದಾಶಿವಪ್ಪ, ರಾಜಶೇಖರ್ ಇತರರಿದ್ದರು.