

ನವಲಗುಂದ: ಶಿಕ್ಷಕರೊಬ್ಬರನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆ ಮಾಡಿದ್ದರಿಂದ ಆಕ್ರೋಶಗೊಂಡ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು (ಎಸ್ಡಿಎಂಸಿ) ಶತಮಾನದ ಇತಿಹಾಸ ಹೊಂದಿರುವ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿ ಪ್ರತಿಭಟಸಿದ ಘಟನೆ ಮಂಗಳವಾರ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ಪ್ರಸ್ತುತ ಹೆಚ್ಚುವರಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ವಿಲೀನಗೊಳಿಸಿದ್ದು, ಒಟ್ಟು 210 ವಿದ್ಯಾರ್ಥಿಗಳನ್ನೊಳಗೊಂಡಿದೆ. ಸದ್ಯ ಎರಡು ಶಾಲೆಗಳ ಮಧ್ಯೆ ಒಂದು ಖಾಲಿ ಹುದ್ದೆ ಇದ್ದರೂ ಇದಕ್ಕೆ ಗ್ರಾಮಸ್ಥರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ ಶಾಲೆಯಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಶಿಕ್ಷಣ ಇಲಾಖೆ ವರ್ಗಾವಣೆ ಮಾಡಿದ್ದು ಎಸ್ಡಿಎಂಸಿ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಆಗುವುದರಿಂದ ಇದ್ದ ದೈಹಿಕ ಶಿಕ್ಷಣ ಶಿಕ್ಷಕರನ್ನು ಮುಂದುವರಿಸಿ ಅಥವಾ ಬೇರೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೀಡಬೇಕೆಂಬುದು ಎಸ್ಡಿಎಂಸಿ ಆಡಳಿತ ಮಂಡಳಿಯ ವಾದವಾಗಿದೆ. ಇನ್ನು ಶತಮಾನದ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದು, ಹಳೇ ವಿದ್ಯಾರ್ಥಿಗಳು ಆಗಾಗ ಅಗತ್ಯ ದಾಖಲೆ ಪಡೆಯಲು ಬಂದರೆ ವರ್ಗದ ಕೊಠಡಿಯಲ್ಲಿರುವ ಶಿಕ್ಷಕರೇ ಪಾಠಗಳನ್ನು ಬಿಟ್ಟು ದಾಖಲೆ ನೀಡಲು ಮುಂದಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೊಂದರೆಯಾಗುತ್ತದೆ ಎಂಬುದು ಶಿಕ್ಷಕರ ವರ್ಗಾವಣೆ ವಿರೋಧಿಸಲು ಒಂದು ಕಾರಣವಾಗಿದೆ.
ವರ್ಗಾವಣೆ ವಿರೋಧಿಸಿ ನಡೆದ ಪ್ರತಿಭಟನೆ ಮಕ್ಕಳ ಪಾಠ, ಆಟದ ಮೇಲೂ ಪರಿಣಾಮ ಬೀರಿದ್ದು, ಎಲ್ಲ ಮಕ್ಕಳೂ ಸಂಜೆವರೆಗೆ ಶಾಲಾ ಆವರಣದಲ್ಲಿ ಕುಳಿತು ಪ್ರತಿಭಟಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡದ, ಸರ್ಕಾರದ ನಿಯಮಾನುಸಾರ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಮಕ್ಕಳ ಹಿತ ದೃಷ್ಟಿಯಿಂದ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರಲ್ಲದೆ, ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಆಡಳಿತ ಮಂಡಳಿ ಪಟ್ಟು ಸಡಿಲಿಸದಿರುವುದು ಪ್ರತಿಭಟನೆ ಮುಂದುವರಿಕೆಯ ಸಂದೇಶ ನೀಡಿದ್ದಾರೆ.
ಶತಮಾನದ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಮಕ್ಕಳ ದೈಹಿಕ ಚಟುವಟಿಕೆಗೆ ಅಗತ್ಯವಾಗಿ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯತೆಯಿದೆ. ಹೀಗಾಗಿ ನಮ್ಮೂರ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಮಂಜುನಾಥ ಕಾಲವಾಡ ಅಧ್ಯಕ್ಷರು, ಎಸ್ಡಿಎಂಸಿ, ಮೊರಬ