ಜನಿವಾರ ತೆಗೆಸಿದ, ಪ್ರವಾಸಿಗರ ಹತ್ಯೆ ಘಟನೆಗೆ ಖಂಡನೆ

Condemnation of the murder of tourists
Published on

ಹಾನಗಲ್ಲ: ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಪೈಶಾಚಿಕ ಹತ್ಯಾಕಾಂಡ ಹಾಗೂ ಕರ್ನಾಟಕದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ತೆಗೆಸಿರುವ ಘಟನೆ ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕದಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬ್ರಾಹ್ಮಣ ಸಮಾಜದ ಹಿರಿಯ ಕೆ.ಎಲ್. ದೇಶಪಾಂಡೆ ಮಾತನಾಡಿ, ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಲವೆಡೆ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಅಪಚಾರ ಮಾಡಲಾಗಿದೆ. ಬ್ರಾಹ್ಮಣ ಸಮುದಾಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಹುನ್ನಾರ ಖಂಡಿಸುತ್ತೇವೆ. ಸರ್ಕಾರಗಳು ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಉಗ್ರಗಾಮಿಗಳನ್ನು ಮಟ್ಟ ಹಾಕುವಲ್ಲಿ ಹಿಂದೆ ಸರಿಯಬಾರದು. ಒಂದು ದೇಶ ಒಂದೇ ನೀತಿ, ಎಲ್ಲರೂ ಸಮಾನರು ಎಂಬ ನಿಯಮ ಅನ್ವಯವಾಗಬೇಕು ಎಂದರು.

ಮಹಾಸಭಾ ತಾಲೂಕು ಅಧ್ಯಕ್ಷ ರವಿಚಂದ್ರ ಪುರೋಹಿತ ಮಾತನಾಡಿ, ಧಾರ್ವಿುಕ ನಂಬಿಕೆಗಳಿಗೆ ಚ್ಯುತಿ ತರುವ ಅಸಂಬದ್ಧ ಕೃತ್ಯಗಳನ್ನು ಖಂಡಿಸುತ್ತೇವೆ. ಸರ್ಕಾರಗಳು ಇಂಥ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಬೀದರ್, ಧಾರವಾಡ, ತೀರ್ಥಹಳ್ಳಿ, ಶಿವಮೊಗ್ಗ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ತೆಗೆಸಿದ್ದಲ್ಲದೆ, ಸಾಗರದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜನಿವಾರವನ್ನೇ ಕತ್ತರಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿಲ್ಲ. ಅಧಿಕಾರಿಗಳು ಮನಬಂದಂತೆ ವರ್ತಿಸಿರುವುದು ಬ್ರಾಹ್ಮಣ ಸಮುದಾಯದ ಧಾರ್ವಿುಕ ಭಾವನೆಗಳಿಗೆ ಘಾಸಿ ಮಾಡಿದೆ. ಇದನ್ನು ಬ್ರಾಹ್ಮಣ ಸಮುದಾಯ ಖಂಡಿಸುತ್ತದೆ. ಕೂಡಲೇ ಇಂಥ ದರ್ಪ, ದುರ್ವರ್ತನೆ ತೋರಿದ ಅಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಪಟ್ಟಣದ ಶಂಕರ ಮಠದಿಂದ ತಹಸೀಲ್ದಾರ್ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ವೇ. ಶಂಕರಭಟ್ ಜೋಶಿ, ಘನಶ್ಯಾಮ ದೇಶಪಾಂಡೆ, ಎಂ.ಎಲ್. ಕಾಮನಹಳ್ಳಿ, ರವೀಂದ್ರ ದೇಶಪಾಂಡೆ, ಗಿರೀಶ ದೇಶಪಾಂಡೆ, ಶ್ರೀನಿವಾಸ ಶಿವಪೂಜಿ, ರವಿ ಪೋತದಾರ, ಆರ್.ಸಿ. ದೇಸಾಯಿ, ಕೃಷ್ಣಾ ಪೂಜಾರ, ಪ್ರಮೋದ ದೇಶಪಾಂಡೆ, ಎಂ.ಆರ್. ಹೆಗಡೆ, ದತ್ತಾತ್ರೇಯ ಇನಾಂದಾರ, ಟಿ.ಆರ್. ವೇದಂಭಟ್​ನವರ, ಎಲ್.ಎಂ. ದೇಸಾಯಿ, ವಾರುಣಿ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಶಿಲ್ಪಾ ಕರಗುದರಿ, ಮಾಧುರಿ ಕಾಮನಹಳ್ಳಿ, ಪಾರ್ವತಿಬಾಯಿ ಕಾಶೀಕರ, ಸುಧಾಬಾಯಿ ದೇಶಪಾಂಡೆ, ವಿಜಯಲಕ್ಷ್ಮೀ ಜೋಶಿ, ಸುರೇಖಾ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net