

ಮದ್ದೂರು: ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಜನೌಷಧ ಕೇಂದ್ರಗಳನ್ನು ಇಲ್ಲದಂತೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಜನೌಷಧ ಕೇಂದ್ರಗಳಲ್ಲಿ ಬಡಜನತೆಗೆ ಶೇ. 90 ಮತ್ತು 70ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳು ದೊರೆಯುತ್ತಿದ್ದವು. ಆದರೆ ದೊಡ್ಡ ದೊಡ್ಡ ಕಾರ್ಪೊರೇಟ್ ಔಷಧಿ ಕಂಪನಿಗಳು ಮತ್ತು ಮೆಡಿಕಲ್ ಶಾಪ್‌ಗಳೊಂದಿಗೆ ರಾಜ್ಯ ಸರ್ಕಾರ ಶಾಮೀಲಾಗಿ, ಜನೌಷಧ ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.
ಬಡ ರೋಗಿಗಳು ಚಿಕಿತ್ಸೆ ಪಡೆಯುವುದೇ ಒಂದು ದೊಡ್ಡ ಸಾಹಸವಾಗಿರುವಾಗ ಶೇ.100 ರಷ್ಟು ಬೆಲೆಕೊಟ್ಟು ಮೆಡಿಕಲ್ ಶಾಪ್‌ಗಳಲ್ಲಿ ಔಷಧಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಕಾರಣಕ್ಕೂ ಜನೌಷಧ ಕೇಂದ್ರಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್ ಮಾತನಾಡಿ, ಸರ್ಕಾರ ಜನೌಷಧ ಕೇಂದ್ರಗಳನ್ನು ಮುಚ್ಚುವುದು ಘೋರ ಅಪರಾಧವಾಗಿದೆ. ಇದರಿಂದ ಹಿಂದೆ ಸರಿದು ಎಂದಿನಂತೆ ಜನೌಷಧ ಕೇಂದ್ರಗಳು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾಡಿನಾದ್ಯಂತ ಚಳವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಡಾ.ಸೀತಾರಾಮ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಮುಖಂಡರಾದ ಸೆಲ್ವಿ ಮುರುಗೇಶ್, ಆತಗೂರು ನಿಂಗಯ್ಯ, ಕರಿಗೌಡ, ಎಚ್.ಶಿವವಲಿಂಗಯ್ಯ, ಪಟೇಲ್ ಹರೀಶ್, ಶೇಖರಪ್ಪ, ಪ್ರಭು, ಬ್ಯಾಂಕ್ ಚಿಕ್ಕಣ್ಣ, ಎಂ.ವೀರಪ್ಪ, ಪೂಜಾರಪ್ಪ, ರೈತ ಮುಖಂಡರಾದ ಗುಡಿ ದೊಡ್ಡಿ ಶಿವಲಿಂಗಯ್ಯ, ಹುರುಗಲವಾಡಿ ಉಮೇಶ್, ಕೋಣಸಾಲೆ ಕೃಷ್ಣ, ಕಬ್ಬಾರೆ ರವಿ, ಪುಟ್ಟಲಿಂಗಯ್ಯ, ರಾಜೇಶ್ ಇದ್ದರು.