

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಜು. 9ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಹಾಗೂ ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ತಿಳಿಸಿದರು.
ಕೇಂದ್ರದ ಸಮ್ಮಿಶ್ರ ಸರ್ಕಾರ ದುಡಿಯುವ ಜನತೆ ಮೇಲೆ ಕ್ರೂರ ನೇತಿ ಹೇರಲು ಹೊರಟಿದೆ. ಕಾರ್ಪೊರೇಟ್ ಮತ್ತು ದೊಡ್ಡ ಉದ್ದಿಮೆಗಳ ಲಾಭವು ಅನೇಕ ಪಟ್ಟು ಹೆಚ್ಚಿ ಪರಾಕಷ್ಟೆಯನ್ನು ತಲುಪಿದೆ. ಸಂಘಟಿತ ವಲಯದ ಕಾರ್ಮಿಕರ ವೇತನ ಮಾತ್ರ ಕುಸಿದಿದೆ. ಉದ್ಯೋಗ ಸೃಷ್ಠಿಯೂ ಆಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಿಸಿಲಿನ ಅಲೆ, ಪ್ರವಾಹ, ಚಂಡಮಾರುತಗಳು, ಅಕಾಲಿಕ ಮಳೆ ಮತ್ತು ಇತರ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳು ಮತ್ತು ಹಾನಿಗಳನ್ನು ಸರಿದೂಗಿಸಲು ಹವಾಮಾನ ಸ್ಥಿತಿ ಸ್ಥಾಪಕತ್ವ ನಿಧಿ ಸ್ಥಾಪಿಸಬೇಕು. ವಲಸೆ ಕಾರ್ಮಿಕರ ಕುರಿತಾದ ರಾಷ್ಟ್ರೀಯ ನೀತಿಯು ತುರ್ತಾಗಿ ಅಗತ್ಯವಿದೆ ಮತ್ತು ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ನ್ನು ಪುನರುಜ್ಜೀವನಗೊಳಿಸಬೇಕು. ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ, ಆಶಾ ಕಿರಣ ಇತ್ಯಾದಿ ಸ್ಕೀಮ್ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ನೀಡುವ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸು ಜಾರಿಗೆ ತರಬೇಕು ಮತ್ತು ನ್ಯಾಯಾಂಗ ನಿರ್ದೇಶನಗಳ ಪ್ರಕಾರ ಅವರಿಗೆ ಗ್ರಾಚ್ಯುಟಿಯನ್ನು ತಕ್ಷಣವೇ ಖಚಿತಪಡಿಸಬೇಕು. ನರೇಗಾ ಅಡಿಯಲ್ಲಿ ಹೆಚ್ಚಿದ ಕನಿಷ್ಠ ವೇತನದೊಂದಿಗೆ ವಾರ್ಷಿಕ 200 ದಿನಗಳ ಕೆಲಸವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಸಂಘಟನಾಕಾರ ಚಂದ್ರಶೇಖರ ಘಂಟೆಪ್ಪಗೋಳ ಮಾತನಾಡಿ, ಅತ್ಯುನ್ನತ ತ್ರಿಪಕ್ಷೀಯ ಸಂಸ್ಥೆಯಾದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ತಕ್ಷಣವೇ ಕರೆಯಬೇಕು. ಕೆಲಸದ ಸ್ಥಳದಲ್ಲಿ ಹಕ್ಕುಗಳ ಮೂಲಭೂತ ತತ್ವಗಳನ್ನು ಕೆಲಸದ ಸ್ಥಳ ಸುರಕ್ಷತೆಗೆ ಸಂಬಂಧಿಸಿದಂತೆ ಪಾಲಿಸಬೇಕು. ಗೃಹಾಧಾರಿತ ಕಾರ್ಮಿಕರ ಮೇಲಿನ ನಿರ್ಣಯಗಳನ್ನು ತಕ್ಷಣವೇ ಅನುಮೋದಿಸಬೇಕು. ಸಾರ್ವಜನಿಕ ಸೇವಾ ವಲಯಗಳ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ನಿಯಮಿತ ಪರಿಷ್ಕರಣೆಯೊಂದಿಗೆ ಬೆಲೆ ಸೂಚ್ಯಂಕದೊಂದಿಗೆ ಕನಿಷ್ಠ ವೇತನವಾಗಿ ರೂ. 26000 ಖಚಿತಪಡಿಸಬೇಕು. 8 ನೇ ವೇತನ ಆಯೋಗವನ್ನು ಆದಷ್ಟು ಬೇಗ ರಚಿಸಬೇಕು. ಸ್ಥಿರಾವಧಿಯ ಉದ್ಯೋಗ ಮತ್ತು ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಚಾಲಕ ಸುರೇಶ ಜೀಬಿ ಮಾತನಾಡಿ, ಗುತ್ತಿಗೆ ಪದ್ಧತಿ ನಿಲ್ಲಿಸಬೇಕು. ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ 8 ಗಂಟೆ ಕೆಲಸದ ಹಕ್ಕಿನ ಉಲ್ಲಂಘನೆ ತಡೆಯಬೇಕು. ಹೊಸ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಾಕಷ್ಟು ನಿಧಿಯನ್ನು ಒದಗಿಸಬೇಕು. ವಂತಿಗೆ ರಹಿತ ಹಳೆಯ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸಬೇಕೆಂದು ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಲಕ್ಷ್ಮಣ ಹಂದ್ರಾಳ, ಮಹಾದೇವಿ ಧರ್ಮಶೆಟ್ಟಿ, ಸುರೇಖಾ ರಜಪೂತ, ಭರತಕುಮಾರ ಎಚ್.ಟಿ, ಪ್ರಾಂತ ರೈತ ಸಂಘದ ಮುಖಂಡ ಭೀಮರಾಯ ಪೂಜಾರಿ ಮತ್ತಿತರರಿದ್ದರು.