ಶ್ರೀ ಶಿವಾನಂದಸ್ವಾಮೀಜಿ ಕೊಲೆಗೆ ಖಂಡನೆ

Published on

ಮೈಸೂರು: ಸಿದ್ದಾರ್ಥನಗರದ ಶ್ರೀ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದಸ್ವಾಮೀಜಿ ಅಮಾನುಷ ಕೊಲೆಯನ್ನು ಖಂಡಿಸಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ-ಲಿಂಗಾಯತ ಮಠಾಧಿಪತಿಗಳ ಗೋಷ್ಠಿ, ಸ್ವಾಮೀಜಿ ಸಾವಿಗೆ ವಿಷಾದ ವ್ಯಕ್ತಪಡಿಸಿದೆ.
ಮೂಲತಃ ಮಂಡ್ಯ ಜಿಲ್ಲೆ ಅವ್ವೇರಹಳ್ಳಿಯ ಶ್ರೀಶಿವಾನಂದಸ್ವಾಮೀಜಿ, ಅಲ್ಲಿಯ ಮಠಕ್ಕೆ ಪೀಠಾಧಿಪತಿಯಾಗಿ ಬಳಿಕ ಮೈಸೂರಿನಲ್ಲಿ ಶ್ರೀ ಅನ್ನದಾನೀಶ್ವರ ಮಠ ಸ್ಥಾಪಿಸಿದರು. ಜೆಎಸ್‌ಎಸ್ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕೆಲ ವರ್ಷ ನಗರದ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೈಸೂರು ರಾಜಮನೆತನದವರೊಂದಿಗೆ ಹಿಂದೆ ನಿಕಟ ಬಾಂಧವ್ಯ ಹೊಂದಿದ್ದ ಶ್ರೀಗಳು, ಗೋಷ್ಠಿಯ ಸದಸ್ಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು ಎಂದು ಗೋಷ್ಠಿಯ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀಗಳ ಅಗಲುವಿಕೆಯಿಂದ ಭಕ್ತರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಬೇಕು ಎಂದು ಕೋರಿರುವ ಅವರು, ಶ್ರೀಗಳ ಹತ್ಯೆಗೆ ಕಾರಣವೇನು? ಇದರ ಹಿಂದೆ ಯಾರು ಇದ್ದಾರೆ ಇತ್ಯಾದಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net