

ಎಚ್.ಡಿ.ಕೋಟೆ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಸಂಸ (ಅಂಬೇಡ್ಕರ್ ವಾದ) ಸಂಘಟನೆ ಹಾಗೂ ಜೀವಿಕ ಸಂಘಟನೆಗಳು ಬುಧವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರದ ಕಾನೂನು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮೊದಲಿಗೆ ದಸಂಸ (ಅಂಬೇಡ್ಕರ್ ವಾದ ) ಸಂಘಟನೆಯ ಪ್ರತಿಭಟನಾಕಾರರು, ಇದು ನ್ಯಾ.ಬಿ. ಅರ್.ಗವಾಯಿ ಅವರ ಮೇಲಿನ ದಾಳಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉನ್ನತ ಹುದ್ದೆ ಮೇಲಿನ ದಾಳಿ. ಅಲ್ಲದೆ ನ್ಯಾಯ, ಘನತೆ, ವ್ಯವಸ್ಥೆ ಮತ್ತು ಆಡಳಿತದ ಮೇಲಿನ ದಾಳಿ. ಇಂತಹ ಘಟನೆಗಳಿಂದದಾಳಿ ನ್ಯಾಯಾಂಗದ ಗೌರವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಲಿದೆ ಎಂದು ಕಿಡಿಕಾರಿದರು.
ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ಭಾರತದ ಜಾತಿ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ ಯಾರು ಈ ಪುಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುತ್ತಾರೋ ಅವರೆಲ್ಲರನ್ನು ಸನಾತನವಾದಿಗಳು ತಮ್ಮ ವಿರೋಧಿಗಳಂತೆ ಕಾಣುತ್ತಾರೆ. ಸಂವಿಧಾನ ಜಾರಿಯಾದ ದಶಕಗಳ ನಂತರವೂ ಈ ದೇಶದ ಜಾತಿವಾದಿ ಮನಸ್ಸುಗಳು ಅಸಮಾನತೆ ಮತ್ತು ಅಸಹಿಷ್ಣತೆಯನ್ನು ಇನ್ನೂ ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ ಎಂದು ದೂರಿದರು.
ವಕೀಲ ರಾಕೇಶ್ ಕುಮಾರ್‌ನನ್ನು ದೇಶ ದ್ರೋಹದ ಕಾಯಿದೆಯಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಶ್ರೀನಿವಾಸ್ ಅವರ ಮೂಲಕ ಕೇಂದ್ರ ಕಾನೂನು ಸಚಿವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಅನುಷಾ ಕೋಟೆ, ತಾಲೂಕು ಸಂಘಟನ ಸಂಚಾಲಕ ಕಾಳಪ್ಪಾಜಿ, ಟೌನ್ ಸಂಚಾಲಕ ಉದಯಕೋಟೆ, ಮಟಕೆರೆ ಕೃಷ್ಣ, ಸತೀಶ್ ಕುಮಾರ್, ಪ್ರಕಾಶ್ ಬುದ್ಧ, ಆಟೊ ಕುಮಾರ್, ಸತೀಶ್ ಕುಮಾರ್, ಸಂಜು, ಶಿರಮಹಳ್ಳಿ ವಿಷ್ಣು, ನೂರಲಕುಪ್ಪೆ ಸುರೇಶ್, ಶಿವಣ್ಣ ಕೆ.ಜಿ ಹಳ್ಳಿ, ಷರೀಪ್ ಕಾಲೋನಿ ನಯಾಜ್, ಗೀತಾ ಇತರರು ಇದ್ದರು.
ಜೀವಿಕ ಪ್ರತಿಭಟನೆ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಮನುವಾದಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಜೀವಿಕ ಸಂಘಟನೆ ಜಿಲ್ಲಾ ಸಂಚಾಲಕ ಬಸವರಾಜು ದೂರಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಜೀವಿಕ ಹಾಗೂ ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಿಜೈ ಮೇಲೆ ಶೂ ಎಸೆಯುವ ಮೂಲಕ ದೇಶವೇ ತಲೆತಗ್ಗಿಸುವಂತಹ ನೀಚತನವನ್ನು ವಕೀಲ ಪ್ರದರ್ಶಿಸಿದ್ದಾನೆ. ಇಂತಹ ಮನುವಾದಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೂ ಮುನ್ನ ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡು, ಈ ಸಂಬಂಧ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೀವಿಕ ಸಂಘಟನೆಯ ರಾಜ್ಯ ಸಂಚಾಲಕ ಉಮೇಶ ನೂರುಕುಪ್ಪೆ, ತಾಲೂಕು ಸಂಚಾಲಕ ಚಂದ್ರಶೇಖರ, ಆದಿ ಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ಹೈರಿಗೆ ಶಿವರಾಜು, ದಸಂಸ ಸಂಘಟನೆಯ ಪುಟ್ಟಮಾದು, ಕುಮಾರ, ಅಂತರಸಂತೆ ಪ್ರಗತಿಪರ ಒಕ್ಕೂಟದ ಪ್ರಕಾಶ್ ಬುದ್ಧ, ಜೀವಿಕ ಸಂಘಟನೆಯ ಶಿವಣ್ಣ, ನಟರಾಜು, ಶಿವರಾಜು, ಚೆನ್ನ, ಮಹೇಶ ಇತರರು ಇದ್ದರು.