

ಹೊಸದುರ್ಗ: ಹೊಳಲ್ಕೆರೆ-ಹೊಸದುರ್ಗ ಮುಖ್ಯರಸ್ತೆಗೆ ತಾಲೂಕಿನ ಹೇರೂರು ಗ್ರಾಮದ ಬಳಿ ರಸ್ತೆ ಸುಂಕ ವಸೂಲಿ ಕೇಂದ್ರ (ಟೋಲ್) ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.
ಟೋಲ್ ಸಂಗ್ರಹ ವಿರೋಧಿಸಿ ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಟೋಲ್ ನಿರ್ಮಾಣದ ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಟೋಲ್ ನಿರ್ಮಾಣ ಜನವಿರೋಧಿಯಾಗಿದ್ದು, ಇದಕ್ಕೆ ಭೂಮಿ ನೀಡಲು ರೈತರು ಸಿದ್ಧರಿಲ್ಲ. ಅವರಿಂದ ಬಲವಂತವಾಗಿ ಜಮೀನು ಪಡೆಯುವುದನ್ನು ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಸ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸರ್ಕಾರ ವಾಹನಗಳನ್ನು ಖರೀದಿಸುವಾಗಲೇ ರಸ್ತೆ ಶುಲ್ಕವನ್ನು ವಸೂಲಿ ಮಾಡುತ್ತದೆ. ರಸ್ತೆ ನಿರ್ಮಿಸುವುದು ಸರ್ಕಾರದ ಹೊಣೆ. ಟೋಲ್ ಹೆಸರಲ್ಲಿ ಜನರನ್ನು ಸುಲಿಗೆ ಮಾಡಲು ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ. ವಿರೋಧದ ಮಧ್ಯೆಯೂ ಟೋಲ್ ನಿರ್ಮಿಸಿದರೆ ಅದನ್ನು ಧ್ವಂಸ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೊಸದುರ್ಗ ಪಟ್ಟಣ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣಹೋಮ ಮಾಡಲಾಗಿದೆ. ಮರಗಳನ್ನು ಕತ್ತರಿಸುವ ಮುಂಚೆ ಗಿಡ ನೆಟ್ಟು ಬೆಳಸಬೇಕಾಗಿತ್ತು. ಮರಗಳ ರಕ್ಷಣೆ ಹೊತ್ತ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಮರಗಳನ್ನು ಕಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಾಣಿ ವಿಲಾಸ ಸಾಗರ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ರೈತರ ಕಷ್ಟ ಕೇಳುವವರು ಯಾರು ಇಲ್ಲ. ಎರಡು ವರ್ಷವಾದರೂ ಪರಿಹಾರ ದೊರೆತಿಲ್ಲ. ಶಾಸಕ ಬಿ.ಜಿ.ಗೋವಿಂದಪ್ಪ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಮುಖಂಡರಾದ ಕರಿಸಿದ್ದಯ್ಯ, ಬಯಲಪ್ಪ, ಶಿವಕುಮಾರ, ಬಸವರಾಜಪ್ಪ ಮತ್ತಿತರಿದ್ದರು.